
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಶುಲ್ಕದ ಬರೆ
ರಾಮನಗರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಸಂಚಾರ ಶೇ.22 ರಷ್ಟು ಶುಲ್ಕವನ್ನು ಮತ್ತಷ್ಟು ಹೆಚ್ಚಳ ಮಾಡಿದೆ.
ಎನ್.ಹೆಚ್.ಹೈವೆ ಪ್ರಾಧಿಕಾರ ಎಕ್ಸ್ ಪ್ರೆಸ್ ವೇ ಟೋಲ್ ದರ ಏರಿಕೆಯನ್ನು ಜೂನ್ 01 ರಿಂದಲೇ ಈ ದುಬಾರಿ ಶುಲ್ಕ ವಸೂಲಾತಿ ನಡೆಯುತ್ತಿದ್ದು, ವಾಹನಗಳಿಗೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಇರುವ ಕಾರಣ ಶುಲ್ಕ ಏರಿಕೆ ವಾಹನ ಸವಾರರು ಮತ್ತು ಮಾಲೀಕರ ಗಮನಕ್ಕೆ ಬಂದಿಲ್ಲ. ಹೆಚ್ಚಿನ ಹಣ ಕಟ್ ಆಗುತ್ತಿರುವುದು ನಿಧಾನವಾಗಿ ಗೊತ್ತಾಗಿದೆ.
ಈ ಹಿಂದೆ ಏಪ್ರಿಲ್ 01ರಂದೇ ಹೆದ್ದಾರಿ ಪ್ರಾಧಿಕಾರ ದರ ಏರಿಕೆ ಮಾಡಿದ್ದು ಸಾರ್ವಜನಿಕ ಆಕ್ರೋಶದ ಹಿನ್ನಲೆಯಲ್ಲಿ ದರ ಹೆಚ್ಚಳವನ್ನು ವಾಪಸ್ಸ್ ಪಡೆದಿತ್ತು. ಇದೀಗ ಮತ್ತೆ ಜೂನ್ 01ರಿಂದ ಟೋಲ್ ದರ ಪರಿಷ್ಕರಣೆ ಮಾಡಿದೆ. ಶೇ.22 ರಷ್ಟು ಶುಲ್ಕದಲ್ಲಿ ಏರಿಕೆಯಾಗಿರುವ ವಿಷಯವನ್ನು ಪ್ರಾಧಿಕಾರದ ಮೂಲಗಳು ಖಚಿತಪಡಿಸಿವೆ.
ಕಾರ್, ವ್ಯಾನ್, ಜೀಪ್‌ಗಳ ಏಕಮುಖ ಸಂಚಾರಕ್ಕೆ ರೂ.135 ರಿಂದ ರೂ.165ಕ್ಕೆ ಏರಿಕೆ(30 ರೂ ಹೆಚ್ಚಳ). ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ರೂ.220ರಿಂದ ರೂ 270ಕ್ಕೆ ಏರಿಕೆ(50ರೂ ಹೆಚ್ಚಳ). ಟ್ರಕ್, ಬಸ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ ರೂ.460 ರಿಂದ ರೂ.565ಕ್ಕೆ ಏರಿಕೆ.(105 ಹೆಚ್ಚಳ). 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರಕ್ಕೆ ರೂ. 500 ರಿಂದ ರೂ.615ಕ್ಕೆ ಏರಿಕೆಯಾಗಿದೆ (115 ರೂ ಹೆಚ್ಚಳ). ಭಾರಿ ವಾಹನಗಳ ಏಕಮುಖ ಸಂಚಾರಕ್ಕೆ ರೂ. 720ರಿಂದ ರೂ. 885ಕ್ಕೆ ಏರಿಕೆ ಮಾಡಲಾಗಿದೆ (165 ಹೆಚ್ಚಳ) 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ಎಕಮುಖ ಸಂಚಾರಕ್ಕೆ ರೂ.880ರಿಂದ ರೂ.1,080 ವರೆಗೆ (200 ರೂ.ಹೆಚ್ಚಳ) ಏರಿಸಿರುವುದು ಕಂಡುಬಂದಿದೆ.