ಬೆಂಗಳೂರೆಲ್ಲ ಮುಳಗಿಲ್ಲ, ಮಳೆ ನಮ್ಮನ್ನು ಕೇಳಿ ಬರುತ್ತದೆಯೇ: ಸಿಎಂ ಬೊಮ್ಮಾಯಿ

Spread the love

ಬೆಂಗಳೂರೆಲ್ಲ ಮುಳಗಿಲ್ಲ, ಮಳೆ ನಮ್ಮನ್ನು ಕೇಳಿ ಬರುತ್ತದೆಯೇ: ಸಿಎಂ ಬೊಮ್ಮಾಯಿ

ಮೈಸೂರು: ‘ಮಳೆಯು ಆಡಳಿತ ವ್ಯವಸ್ಥೆಯನ್ನು ಕೇಳಿಬರುತ್ತದೆಯೇ? 80 ವರ್ಷಗಳಲ್ಲಿ ಆಗದಿರುವಷ್ಟು ಮಳೆ ಒಮ್ಮೆಲೇ ಬಂದಿದೆ. ಇಡೀ ಬೆಂಗಳೂರೇನೂ ಮುಳುಗಿ ಹೋಗಿಲ್ಲ. ಎಲ್ಲವೂ ಮುಳುಗಡೆಯಾಗಿದೆ ಎಂದು ಬಿಂಬಿಸುವ ಅವಶ್ಯಕತೆ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.

ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಎಂಟು ವಲಯಗಳಿವೆ. ಎರಡರಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು. ಒಂದು ವಲಯ (ಬೊಮ್ಮನಹಳ್ಳಿ) ಸಂಪೂರ್ಣ ನಿಯಂತ್ರಣದಲ್ಲಿದೆ. ಮಹದೇವಪುರ ವಲಯದಲ್ಲಿ 69 ಕೆರೆಗಳು ತುಂಬಿ ಹರಿದಿದ್ದರಿಂದ ಹಾಗೂ ಮತ್ತೆ ನಿರಂತರವಾಗಿ ಮಳೆಯಾದ್ದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಬಂದಿದೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ 164 ಕೆರೆಗಳೂ ತುಂಬಿವೆ. ಅನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿದೆ. ಇಂಥ ಮಳೆಗೆ ಯಾವ ಚರಂಡಿಗಳನ್ನು ಮಳೆಗೆ ವಿನ್ಯಾಸ ಮಾಡಲಾಗಿರುವುದಿಲ್ಲ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿರುವುದು ಹಾಗೂ ಚರಂಡಿ ಬ್ಲಾಕ್ ಆಗಿದ್ದರಿಂದ ನೀರು ಸಂಗ್ರಹವಾಗಿದೆ. ಐಟಿ ಪಾರ್ಕ್‌ ಎದುರು ನೀರು ನಿಂತಿತ್ತು. ಕೆಲವಡೆ ಚರಂಡಿ ಮುಚ್ಚಿ ಕಟ್ಟಿದ್ದಾರೆ. ಕೆಲವೆಡೆ ಬ್ಲಾಕ್ ಆಗಿದೆ. ಬಿಬಿಎಂಪಿ ಸಿಬ್ಬಂದಿ ನೀರು ಹೊರ ಹಾಕಲು ಶ್ರಮಿಸುತ್ತಿದ್ದಾರೆ. ಬಹಳ ದೊಡ್ಡ ಸವಾಲಿದೆ. ವರ್ತೂರು ಕೆರೆ ಹಾಗೂ ಬೆಳ್ಳಂದೂರು ಕೆರೆ ಕೂಡ ತುಂಬಿ ಹರಿಯುತ್ತಿರುವುದರಿಂದ ಸಮಸ್ಯೆಯಾಗಿದೆ’ ಎಂದು ತಿಳಿಸಿದರು.

‘ಯಾರೇ ಒತ್ತವುರಿ ಮಾಡಿದ್ದರೂ ತೆರವುಗೊಳಿಸುವಂತೆ ಸೂಚಿಸಿದ್ದೇನೆ. ನಾನೇ ಮೇಲ್ವಿಚಾರಣೆ ನಡೆಸುತ್ತಿದ್ದೇನೆ. ಆದರೆ, ವಿರೋಧಪಕ್ಷದವರು ಮಳೆ ವಿಚಾರದಲ್ಲೂ ರಾಜಕಾರಣ ಮಾಡುತ್ತಿರುವುದು ದುರ್ದೈವ. ಎಲ್ಲರೂ ಒಗ್ಗಟ್ಟಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭವಿದು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು. ಹೀಗಿದ್ದರೂ ರಾಜಕಾರಣ ಮಾಡುವುದು ಸಣ್ಣತನದ ಪ್ರವೃತ್ತಿ’ ಎಂದು ಕಾಂಗ್ರೆಸ್‌ನವರನ್ನು ಟೀಕಿಸಿದರು.

‘ಕಾಂಗ್ರೆಸ್‌ನವರ ಕಾಲದಲ್ಲಿ ಆಗಿರುವ ಅತಿಕ್ರಮಣ, ಅಕ್ರಮವಾಗಿ ಅನುಮತಿ ಕೊಟ್ಟಿರುವುದು, ಚರಂಡಿ ಮಾಡುವುದಾಗಿ ತಿಳಿಸಿ ಮಾಡದಿರುವುದು, ಆ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರವೆಲ್ಲವೂ ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಅವಾಂತರಕ್ಕೆ ಕಾರಣವಾಗಿದೆ. ಯಾರ‍್ಯಾರ ಕಾಲದಲ್ಲಿ ಏನೇನಾಗಿದೆ ಎನ್ನುವುದನ್ನು ಅಧಿವೇಶನದಲ್ಲಿ ಚರ್ಚಿಸಲು ಸಿದ್ಧವಿದ್ದೇವೆ’ ಎಂದು ತಿಳಿಸಿದರು.

‘ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಮಳೆಯಿಂದ ಹಾನಿಗೊಳಗಾದ, ನೀರೆತ್ತುವ ಕಾರ್ಯಾಗಾರದ ದುರಸ್ತಿ ಕಾರ್ಯ ನಡೆಯುತ್ತಿದೆ. ಬುಧವಾರ (ಸೆ.7)ರ ಬೆಳಿಗ್ಗೆವರೆಗೆ 880 ಎಂ.ಎಲ್‌.ಡಿ. ಘಟಕ ಪ್ರಾರಂಭಿಸುತ್ತೇವೆ. ಬೆಂಗಳೂರಿಗೆ ನೀರು ಪೂರೈಕೆ ವ್ಯವಸ್ಥೆ ಯತಾಸ್ಥಿತಿಗೆ ಬರಲಿದೆ’ ಎಂದು ಪ್ರತಿಕ್ರಿಯಿಸಿದರು.


Spread the love

Leave a Reply

Please enter your comment!
Please enter your name here