ಬೆಂಗ್ರೆಯಲ್ಲಿ ನೂತನ ವಾರ್ಡ್ ಕಾಂಗ್ರೆಸ್ ಕಚೇರಿ ಹಾಗೂ ಜನ ಸೇವಾ ಕೇಂದ್ರ ಉದ್ಘಾಟನೆ 

Spread the love

ಬೆಂಗ್ರೆಯಲ್ಲಿ ನೂತನ ವಾರ್ಡ್ ಕಾಂಗ್ರೆಸ್ ಕಚೇರಿ ಹಾಗೂ ಜನ ಸೇವಾ ಕೇಂದ್ರ ಉದ್ಘಾಟನೆ 

ಮಂಗಳೂರು:  ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನಲ್ಲಿ ಕಾಂಗ್ರೆಸ್ ಕಚೇರಿ ಹಾಗೂ ಜನ ಸೇವಾ ಕೇಂದ್ರವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ರವರು  ಉದ್ಘಾಟಿಸಿದರು.

ಬಳಿಕ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಾ,ಬೆಂಗ್ರೆ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅಬೂಬಕರ್ ಅಶ್ರಫ್ ರವರ ನೇತೃತ್ವದಲ್ಲಿ ಪ್ರಾರಂಭವಾದ ಜನ ಸೇವಾ ಕೇಂದ್ರ ಮತ್ತು ಕಾಂಗ್ರೆಸ್ ಕಚೇರಿ ಈ ಪ್ರದೇಶದ ಜನರಿಗೆ ಬಹಳಸ್ಟು ಪ್ರಯೋಜನವಾಗಲಿದೆ. ಇಲ್ಲಿನ ಜನರು ಪ್ರತಿಯೊಂದಕ್ಕೂ ನಗರವನ್ನು ನೆಚ್ಚಿಕೊಂಡಿದ್ದರು. ಇನ್ನು ಮುಂದೆ ಅವರ ಕೆಲಸ ಇಲ್ಲಿಂದಲೇ ನೆರವೇರಲಿದೆ.

ದೇಶದ ಸ್ವಾತಂತ್ರ್ಯದ ರಕ್ಷಣೆ ಕಾಂಗ್ರೆಸ್ ಪಕ್ಷದ ಮೇಲಿದೆ. ಅದರಲ್ಲೂ ಯುವಕರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಒದಗಿಸಿದ್ದೆವು. ಆದರೆ ಬಿಜೆಪಿ ಪಕ್ಷವು ನಾವು ಮಾಡಿದ್ದ ಕಾರ್ಯಕ್ರಮಗಳ ತಪ್ಪನ್ನು ಹುಡುಕುತ್ತಾಹೋದರು. ನಾವು ಜಾರಿಗೆ ಮಾಡಿದ ಯೋಜನೆಗಳನ್ನು ಅರ್ಧದಲ್ಲಿಯೇ ನಿಲ್ಲಿಸಿದರು. ಬೆಂಗ್ರೆ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನರಿಗೆ ಕಳೆದ 50 ವರ್ಷಗಳಿಂದ ಹಕ್ಕುಪತ್ರ ಇರಲಿಲ್ಲ. ಅದಲ್ಲದೆ ಗ್ರಾಮವು ಕೂಡ ಇರಲಿಲ್ಲ. ನಾನು ಶಾಸಕನಾದ ಬಳಿಕ ಈ ಪ್ರದೇಶದ ಸುಮಾರು 2,500 ಜನರಿಗೆ ಹಕ್ಕುಪತ್ರ ನೀಡಿದ್ದೇನೆ. ಅದಲ್ಲದೆ ಗ್ರಾಮವನ್ನು ಕೂಡ ಮಾಡಿಸಿ ಕೊಟ್ಟಿದ್ದೇನೆ. ಕಾಂಗ್ರೆಸ್ ಪಕ್ಷ ಜನರಿಗೋಸ್ಕರ ಇರುವ ಪಕ್ಷ. ಜನರ ಕಷ್ಟಕ್ಕೆ ಮಿಡಿಯುವ ಪಕ್ಷ. ಬಿಜೆಪಿ ಅಧಿಕಾರ ಬಂದ ನಂತರ ಪ್ರತಿಯೊಂದು ದಿನಸಿ ವಸ್ತುಗಳ ಬೆಲೆ ಗಗನಕ್ಕೆರಿದೆ. ಪೆಟ್ರೋಲ್, ಡಿಸಿಲ್, ಅಡುಗೆ ಅನಿಲದ ಬೆಲೆ ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬಂದು, ಹಿಂದಿನ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದರು.

ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ಬೆಂಗ್ರೆ,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲೂಕ್ಮನ್ ಬಂಟ್ವಾಳ,ಕಾರ್ಪೊರೇಟರ್ ಅಬ್ದುಲ್ ಲತೀಫ್, ಜಿಲ್ಲಾ ಒಬಿಸಿ ಅಧ್ಯಕ್ಷ ವಿಶ್ವಾಸ ದಾಸ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅಬೂಬಕರ್ ಅಶ್ರಫ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿಟಿ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ಲಾರೆನ್ಸ್ ಡಿಸೋಜಾ,ಮಾಜಿ ವಾರ್ಡ್ ಅಧ್ಯಕ್ಷ ಆಸೀಫ್ ಬೆಂಗ್ರೆ, ಅಸ್ಲಾಂ ಬೆಂಗ್ರೆ,ಟಿ. ಕೆ. ಸುಧೀರ್,ಶಾಂತಲಾ ಗಟ್ಟಿ, ಸದಾಶಿವ ಅಮೀನ್ ದುರ್ಗಾ ಪ್ರಸಾದ್, ರೂಪ ಚೇತನ್, ಹೈದರ ಅಲಿ, ಭುವನ್ ಕರ್ಕೇರ, ಇಧಿನ್ ಕುಂಜಿ ಮೊದಲಾದವರು ಉಪಸ್ಥಿತರಿದ್ದರು.


Spread the love