ಬೆಲೆ ಏರಿಸಿದ್ದೇ ಮೋದಿ ಸಾಧನೆ: ಮುಖ್ಯಮಂತ್ರಿ ಚಂದ್ರು

Spread the love

ಬೆಲೆ ಏರಿಸಿದ್ದೇ ಮೋದಿ ಸಾಧನೆ: ಮುಖ್ಯಮಂತ್ರಿ ಚಂದ್ರು

ಕನಕಪುರ: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದನ್ನು ಬಿಟ್ಟರೆ ಇನ್ಯಾವುದೇ ಸಾಧನೆ ಮಾಡಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ.

ಬ್ಲಾಕ್ ಮತ್ತು ಯುವ ಕಾಂಗ್ರೆಸ್ ಆಶ್ರಯದಲ್ಲಿ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ರ್‍ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಆಡಳಿತವಿದ್ದ ಕಾಲದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಸಾಮಾನ್ಯರು ಹಾಗೂ ಕಡುಬಡವರು ನೆಮ್ಮದಿಯಿಂದ ಇದ್ದರು. ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಜನಸಾಮಾನ್ಯರು ಕೊರೊನಾದಿಂದ ಹಿಡಿದು ಅಗತ್ಯ ವಸ್ತುಗಳು, ತೈಲ ಹಾಗೂ ಅಡುಗೆ ಅನಿಲ ದರಗಳ ಬೆಲೆ ಏರಿಕೆಗಳಿಂದ ತತ್ತರಿಸಿ, ನಿತ್ಯ ಬಿಜೆಪಿ ಸರ್ಕಾರಗಳನ್ನು ಶಪಿಸುತ್ತಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲರಾದ ಪರಿಣಾಮ ಈ ಸೋಂಕಿಗೆ ಲಕ್ಷಾಂತರ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡು ಸಹಸ್ರಾರು ಕುಟುಂಬಗಳು ಬೀದಿಪಾಲಾಗಿವೆ ಎಂದು ದೂರಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ವೇಣುಗೋಪಾಲ್ ಮಾತನಾಡಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬಡವರ ಹಾಗೂ ಮಧ್ಯಮ, ಇತರೆ ದುರ್ಬಲ ವರ್ಗದ ಜನರಿಗಾಗಿ ಅನೇಕ ಭಾಗ್ಯಗಳ ಕೊಡುಗೆ ನೀಡುವುದರ ಮೂಲಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ನಂತರದ ಬಿಜೆಪಿ ಸರ್ಕಾರ ಎಲ್ಲ ಭಾಗ್ಯಗಳನ್ನು ಸಮಾಧಿ ಮಾಡಿ ಪ್ರತಿಯೊಂದು ಅಗತ್ಯ ವಸ್ತುಗಳನ್ನು ಬಡವರ ಕೈಗೆಟುಕದಂತೆ ಬೆಲೆಏರಿಸುವ ಮೂಲಕ ಜನಾಕ್ರೋಶಕ್ಕೆ ಕಾರಣವಾಗಿದೆ. ಇಂತಹ ಸರ್ಕಾರ ಕಿತ್ತೊಗೆದಾಗಲೇ ರಾಜ್ಯದ ಜನತೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದರು.

ಪಟ್ಟಣದ ಕಲ್ಲಹಳ್ಳಿ ಗೇಟ್‌ನಿಂದ ಮುಖ್ಯಮಂತ್ರಿ ಚಂದ್ರು ಕುದುರೆ ಏರಿ ಬಂದರೆ, ಎತ್ತಿನಗಾಡಿ ಮೂಲಕ ಟ್ರ್ಯಾಕ್ಟರ್ ಎಳೆದುಕೊಂಡು ಬರುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ನಂತರ ಸೈಕಲ್ ಜಾಥಾ ಮೂಲಕ ಪ್ರತಿಭಟನಾಕಾರರು ಚನ್ನಬಸಪ್ಪ ವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿ ನಂತರ ಮನವಿ ಪತ್ರವನ್ನು ತಹಶೀಲ್ದಾರ್‌ ಗೆ ನೀಡಿದರು.


Spread the love