‘ಬೆಳಕು’ ಯೋಜನೆಯ ಅಡಿಯಲ್ಲಿ ರಾಜ್ಯದ 2.5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ – ಸುನೀಲ್ ಕುಮಾರ್

Spread the love

‘ಬೆಳಕು’ ಯೋಜನೆಯ ಅಡಿಯಲ್ಲಿ ರಾಜ್ಯದ 2.5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ – ಸುನೀಲ್ ಕುಮಾರ್

ಕುಂದಾಪುರ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಸೇರಿದಂತೆ ಪರಿಸರದ 7 ಗ್ರಾಮಗಳ ಧೀರ್ಘಾವಧಿಯ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ 2016 ರಲ್ಲಿ ಆರಂಭವಾಗಿದ್ದ ಕೊಲ್ಲೂರಿನ ವಿದ್ಯುತ್ ಸರಬರಾಜು ಉಪ ಕೇಂದ್ರದ ಕಾಮಗಾರಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಳಂಭವಾಗಿತ್ತು. ಇದೀಗ ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕೇಂದ್ರ ಆರಂಭವಾಗಿದ್ದು, ರಾಜ್ಯದ ಸಚಿವನಾಗಿ ತಾಯಿ ಮೂಕಾಂಬಿಕೆಯ ಸನ್ನಿಧಾನದಕ್ಕೆ ಬಂದಾಗ ಸಂಕಲ್ಪ ಮಾಡಿರುವ ಸೇವೆ ಸಲ್ಲಿಸಿದ ಸಂತೃಪ್ತಿ ಇದೆ. ಈ ಉಪ ಕೇಂದ್ರದಿಂದ ಅಂದಾಜು 9,000 ಮನೆಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲ್ ಕುಮಾರ್ ಹೇಳಿದರು.

ಕುಂದಾಪುರದ ಮೆಸ್ಕಾಂ ವಿಭಾಗದ ಹಾಲ್ಕಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ 33/11 ಕೆವಿ ಸಾಮರ್ಥ್ಯದ ಕೊಲ್ಲೂರು ವಿದ್ಯುತ್ ಉಪ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಗಳಿಂದ ನಿರಪೇಕ್ಷಣಾ ಪತ್ರಗಳ ಅವಶ್ಯಕತೆ ಇಲ್ಲದೆ ಕೇವಲ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‌ಗಳ ಆಧಾರದಲ್ಲಿ ವಿದ್ಯುತ್ ಸಂಪರ್ಕ ಖಾತ್ರಿ ಪಡಿಸುವ ಯೋಜನೆಯ 2ನೇ ಹಂತದ ಆರಂಭವನ್ನು ಮಾಡಲಾಗಿದೆ. ಸುಟ್ಟು ಹೋದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು 24 ಗಂಟೆಗಳ ಒಳಗೆ ಪುನರ್ ಸ್ಥಾಪಿಸುವ ಐ.ಸಿ ಬ್ಯಾಂಕ್‌ ಯೋಜನೆಯಡಿಯಲ್ಲಿ 200 ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್ಗಳನ್ನು ಬದಲಾಯಿಸಲಾಗಿದೆ. ಗ್ರಾಹಕರ ಸಮಸ್ಯೆಗಳನ್ನು ಅರಿತುಕೊಂಡು ಕ್ಷಿಪ್ರ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗಲೆಂದು ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಹಕರ ಅದಾಲತ್ ನಡೆಸಲಾಗುತ್ತಿದೆ. ವಿದ್ಯಾನಿಧಿ, ಗ್ರಾಮ ಒನ್, ಆಯುಷ್ಮಾನ್ ಮುಂತಾದ ಜನಪರ ಯೋಜನೆಗಳೊಂದಿಗೆ ಜನರ ಅನುಕೂಲಕ್ಕಾಗಿ ಯಶಸ್ವಿನಿ ಯೋಜನೆಯನ್ನು ಪರು ಸ್ಥಾಪಿಸಲಾಗಿದೆ. ರಾಜ್ಯದ ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ 100 ಕ್ಕಿಂತಲೂ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅವರು, ಸಾರ್ವಜನಿಕ ಅವಶ್ಯಕತೆಗಾಗಿ ನಮ್ಮ ಭೂಮಿಯನ್ನು ನೀಡಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಅನುಭವಿಸುತ್ತಿರುವ ಭೂಮಿಗಳ ಸಂರಕ್ಷಣೆಯ ಹೊಣೆ ಮಾತ್ರ ನಮ್ಮದು, ಉಳಿದಂತೆ ಅದೆಲ್ಲವೂ ದೇಶದ ಆಸ್ತಿ ಎನ್ನುವ ಭಾವ ನಮ್ಮಲ್ಲಿ ಇರಬೇಕು. ಮಣ್ಣಿನ ಹಾಗೂ ಭೂಮಿಯ ಋಣವನ್ನು ತೀರಿಸುವ ಅವಕಾಶಗಳು ಬಂದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿ ಇಲಾಖೆಯಲ್ಲಿಯೂ ನೌಕಕರು ಸಮಚಿತ್ತರಾಗಿ ದುಡಿಯುವಂತಾಗಲೂ ಸರ್ಕಾರ ಅವರ ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದಿಸಬೇಕು. ಮೆಸ್ಕಾಂ ವಿಭಾಗದಲ್ಲಿ ಮೀಟರ್ ರೀಡರ್ ಆಗಿ ದುಡಿಯುತ್ತಿರುವವರಿಗೆ ಸೇವಾ ಭಧ್ರತೆ ಒದಗಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು, ಇಂಧನ ಸಚಿವ ವಿ.ಸುನೀಲ್ ಕುಮಾರ್, ಸಂಸದ ರಾಘವೇಂದ್ರ ಹಾಗೂ ರಾಜ್ಯದ ಸರ್ಕಾರದ ಇಚ್ಛಾ ಶಕ್ತಿಯಿಂದಾಗಿ, ಕೊಲ್ಲೂರು ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರಿಗೆ ಈ ದಿನವೇ ನಿಜವಾದ ದೀಪಾವಳಿ ಸಂಭ್ರಮವನ್ನು ತಂದಿದೆ. ಕೊಲ್ಲೂರಿನಲ್ಲಿ ವಿದ್ಯುತ್ ಸರಬರಾಜು ಉಪ ಕೇಂದ್ರ ಆರಂಭವಾಗುವ ಮೂಲಕ ಈ ಭಾಗದ ಜನರ ದಶಕಗಳ ಬೇಡಿಕೆ ಈಡೇರಿದಂತಾಗಿದೆ. ಬೈಂದೂರಿನಂತಹ ಹಿಂದುಳಿದ ಕ್ಷೇತ್ರಗಳ ಜನರಿಗೆ ಬೆಳಕು ಯೋಜನೆ ಅವಕಾಶವನ್ನು ತರೆದಿಟ್ಟಿದೆ. ಈ ಉಪ ಕೇಂದ್ರದಿಂದ 1750 ಪಂಪ್ ಸೆಟ್‌ಗಳಿಗೆ ಅನೂಕೂಲವಾಗಲಿದೆ. ಕರ್ಕುಂಜೆ ಹಾಗೂ ಸುತ್ತ-ಮುತ್ತಲಿನ ಪರಿಸರದವರಿಗೆ ಅನೂಕೂಲವಾಗಲು ಕರ್ಕುಂಜೆಯಲ್ಲಿ ವಿದ್ಯುತ್ ಉಪ ವಿಭಾಗ ಕೇಂದ್ರ ಹಾಗೂ ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೊಲ್ಲೂರಿನಲ್ಲಿ ಯು.ಜಿ ಕೇಬಲ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಶಾಸಕರು, ನ.7 ರಂದು ಮುಳ್ಳಿಕಟ್ಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕ್ಷೇತ್ರದ 1,000 ಕೋಟಿ ರೂ. ಅನುದಾನದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಚಾಲನೆಯನ್ನು ಮಾಡಲಾಗುವುದು ಎಂದರು.

ಭೂಮಿ ನೀಡಿದ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಗುತ್ತಿಗೆದಾರ ಡಾ.ಉದಯ್‌ಚಂದ್ರ ಸುವರ್ಣ ಮಂಗಳೂರು, ಸಚಿವ ವಿ.ಸುನೀಲಕುಮಾರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸೌಕೂರು ಜಾತ್ರೆಯ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೃತರಾದ ಪ್ರಶಾಂತ ದೇವಾಡಿಗ ಅವರ ಕುಟುಂಬಿಕರಿಗೆ ಮೆಸ್ಕಾಂ ವತಿಯಿಂದ ನೀಡಲಾದ 1 ಲಕ್ಷ ರೂ. ಪರಿಹಾರ ಹಣವನ್ನು ಸಚಿವ ವಿ.ಸುನೀಲಕುಮಾರ ಹಸ್ತಾಂತರಿಸಿದರು.

ಗೋಳಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಜಡ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಞೆ ವನಜಾಕ್ಷೀ ಎಸ್ ಶೆಟ್ಟಿ, ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮೀನ್ ಶೆಟ್ಟಿ, ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಆಚಾರಿ, ಮೆಸ್ಕಾಂ ತಾಂತ್ರಿಕಾ ವಿಭಾಗದ ನಿರ್ದೇಶಕಿ ಡಿ.ಪದ್ಮಾವತಿ, ಉಡುಪಿ ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ್ ಉಪಾಧ್ಯ, ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ಇದ್ದರು.

ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು, ಮೆಸ್ಕಾಂ ಕುಂದಾಪುರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಕೇಶ್ ಬಿ ಇದ್ದರು.


Spread the love