
ಬೆಳೆ ರಕ್ಷಣೆಗಾಗಿ ನಾಯಿಯನ್ನೇ ಹುಲಿ ಮಾಡಿದ ರೈತ!
ಹನೂರು: ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ವನ್ಯ ಪ್ರಾಣಿಗಳಿಂದ ರಕ್ಷಣೆ ಮಾಡಲು ರೈತರು ಹಲವು ರೀತಿಯ ಸಾಹಸ ಮಾಡುವುದನ್ನು ನಾವು ನೋಡುತ್ತಿರುತ್ತೇವೆ. ಕೆಲವರು ಪ್ರಾಣಿ, ಮನುಷ್ಯನ ಬೊಂಬೆಗಳನ್ನಿಟ್ಟು ಬೆದರಿಸುವ ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರು ಶಬ್ದ ಬರುವಂತೆ ಮಾಡಿ ಓಡಿಸುತ್ತಾರೆ. ಇದೆಲ್ಲದರ ನಡುವೆ ರೈತರೊಬ್ಬರು ತಮ್ಮ ಸಾಕು ನಾಯಿಗೆ ಹುಲಿಯ ಬಣ್ಣವನ್ನು ಬಳಿದು ಥೇಟ್ ಹುಲಿಯಂತೆ ಮಾಡಿದ್ದಾರೆ.
ಹುಲಿಯಂತೆ ಮಾಡಿದರೆ ಅದನ್ನು ನೋಡಿ ಬೇರೆ ಪ್ರಾಣಿಗಳು ಹೆದರಿ ದೂರ ಓಡಬಹುದು ಜತೆಗೆ ಚಿರತೆಗಳಿಂದ ನಾಯಿಯನ್ನು ರಕ್ಷಿಸಬಹುದು ಎಂಬುದು ಅವರ ಉದ್ದೇಶವಾಗಿದೆ. ಆದರೆ ನಾಯಿಯನ್ನು ನೋಡಿ ಅದ್ಯಾವ ಪ್ರಾಣಿಗಳು ಹೆದರಿದವೋ ಗೊತ್ತಿಲ್ಲ. ಅದನ್ನು ಅಪರೂಪಕ್ಕೆ ನೋಡಿದ ಜನ ಮಾತ್ರ ಬೆಚ್ಚಿ ಬೀಳುತ್ತಿದ್ದಾರೆ. ಇನ್ನು ಕೆಲವರು ಇದೆಂಥ ವಿಚಿತ್ರ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ನಾಯಿಯನ್ನು ಹುಲಿ ಮಾಡಲಾಗಿದ್ದು, ಅಲ್ಲಿನ ರೈತರು ಜಮೀನಿಗೆ ಬರುವ ಸಣ್ಣಪುಟ್ಟ ಪ್ರಾಣಿಗಳನ್ನು ಓಡಿಸಲು ಈ ರೀತಿಯ ಕೈಚಳಕ ಮಾಡಿದ್ದಾರೆ. ತಮ್ಮ ಮನೆಯ ನಾಯಿಗೆ ಹುಲಿಯಂತೆ ಪಟ್ಟೆ ಪಟ್ಟೆಯಾಗಿ ಬಣ್ಣ ಬಳಿದಿದ್ದಾರೆ. ದೂರದಿಂದ ನೋಡಿದರೆ ಹುಲಿಯಂತೆ ಕಾಣುತ್ತಿದೆ. ಇದು ಎಲ್ಲೆಂದರಲ್ಲಿ ಓಡಾಡುವುದರಿಂದ ಅದನ್ನು ನೋಡಿ ಇತರೆ ಪ್ರಾಣಿಗಳು ಹೆದರಿಕೊಳ್ಳಲಿ ಎಂಬುದು ಅವರ ಆಲೋಚನೆ ಆಗಿದೆ.
ನಾಯಿಗೆ ಹುಲಿಯಂತೆ ಬಣ್ಣ ಬಳಿದ ಬಳಿಕ ಅದನ್ನು ಓಡಾಡಲು ಬಿಟ್ಟಿದ್ದು ಅದು ಯಾವುದೇ ಪರಿವೇ ಇಲ್ಲದೆ ತನ್ನ ಪಾಡಿಗೆ ಓಡಾಡುತ್ತಿದೆ. ಈ ವ್ಯಾಪ್ತಿಯಲ್ಲಿ ಚಿರತೆಗಳು ಹೆಚ್ಚಾಗಿದ್ದು ಅವುಗಳು ನಾಯಿಗಳ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಹುಲಿಯಂತೆ ಕಾಣುವುದರಿಂದ ನಾಯಿ ಮೇಲೆ ದಾಳಿ ಮಾಡದೆ ಹುಲಿಯೆಂದು ಭಾವಿಸಿ ಚಿರತೆ ತೆಪ್ಪಗಾಗಬಹುದು ಎಂಬ ಉದ್ದೇಶವೂ ಹುಲಿ ಬಣ್ಣ ಬಳಿದಿರುವುದರ ಹಿಂದಿದೆ. ಒಟ್ಟಾರೆಯಾಗಿ ನಾಯಿಗೆ ಹುಲಿಬಣ್ಣ ಬಳಿದಿರುವುದು ಅಚ್ಚರಿಗೆ ಕಾರಣವಾಗಿದೆ.