ಬೆಳ್ತಂಗಡಿ| ಕಾರು–ಬೈಕ್ ಡಿಕ್ಕಿ: ಬೈಕ್ ಸವಾರ ಗಾಯ
ಬೆಳ್ತಂಗಡಿ: ಕಾರು ಹಾಗೂ ಮೋಟಾರು ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣದ ಪಿರ್ಯಾದಿದಾರರಾದ ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ನಿವಾಸಿ ಮಂಜುನಾಥ (38) ಅವರ ದೂರಿನಂತೆ, ಮಾರ್ಚ್ 8ರಂದು ರಾತ್ರಿ ವೇಳೆ ತಮ್ಮ KA 21 L 0135 ನಂ. ಮೋಟಾರು ಸೈಕಲ್ನಲ್ಲಿ ಧರ್ಮಸ್ಥಳದಿಂದ ಕಳಂಜ ಕಡೆಗೆ ತೆರಳುತ್ತಿದ್ದಾಗ ಬೆಳ್ತಂಗಡಿ–ಧರ್ಮಸ್ಥಳ ಗ್ರಾಮದ ಬೋಳಿಯಾರ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.
ಈ ವೇಳೆ ಪಿರ್ಯಾದಿದಾರರ ಎದುರಿನಿಂದ KA 20 MB 4311 ನಂ. ಕಾರನ್ನು ಅದರ ಚಾಲಕ ಸಚಿನ್ ಅಜಾಗರೂಕ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಪಘಾತದ ಪರಿಣಾಮ ಮಂಜುನಾಥ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಕಾರಿನ ಚಾಲಕ ಹಾಗೂ ಸ್ಥಳಕ್ಕೆ ಸೇರಿದ ಸಾರ್ವಜನಿಕರು ಅವರನ್ನು ತಕ್ಷಣ ಉಪಚರಿಸಿ ಚಿಕಿತ್ಸೆಗಾಗಿ ಉಜಿರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 17/2026, ಕಲಂ 281 ಹಾಗೂ 125(ಎ) BNS ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
