ಬೆಳ್ತಂಗಡಿ | ಕುತ್ತೂರು ಮನೆಗಳ್ಳತನ ಪ್ರಕರಣ: ಆರೋಪಿ ‘ಇತ್ತೆ ಬರ್ಪೆ ಅಬೂಬಕರ್’ ಬಂಧನ
ಬೆಳ್ತಂಗಡಿ: ಕುತ್ತೂರಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಇತ್ತೆ ಬರ್ಪೆ ಅಬೂಬಕರ್(71) ಬಂಧಿತ ಆರೋಪಿ.
ನಾರವಿ ಗ್ರಾಮದ ಕುತ್ತೂರಿನ ಮಂಜು ಶ್ರೀ ನಗರದ ಶಿಕ್ಷಕ ಅವಿನಾಶ್ ಎಂಬವರ ಮನೆಯಲ್ಲಿ ಅ.2 ರಿಂದ ಅ.6ರ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ಸಬ್ ಇನ್ಸೆಕ್ಟರ್ ಓಮನ ಮತ್ತು ತಂಡ ನ.11 ರಂದು ರಾತ್ರಿ ವೇಣೂರು ಕುಂಭಶ್ರೀ ಬಳಿ ವಾಹನ ತಪಾಸಣೆ ಮಾಡುವ ವೇಳೆ ಅನುಮಾನಾಸ್ಪದವಾಗಿ ಸ್ಕೂಟರ್ ವಾಹನದಲ್ಲಿ ಬರುತ್ತಿದ್ದ ಇತ್ತೆ ಬರ್ಪೆ ಅಬೂಬಕರ್ ನನ್ನು ತಡೆದು ನಿಲ್ಲಿಸಿ ವಾಹನದ ದಾಖಲೆ ಮತ್ತು ವ್ಯಕ್ತಿಯನ್ನು ಪರಿಶೀಲನೆ ವೇಳೆ ಮಂಗಳೂರಿನಲ್ಲಿ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ.
ವೇಣೂರು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ನಾರವಿಯ ಕುತ್ತೂರಿನ ಅವಿನಾಶ್ ಮನೆಯಲ್ಲಿ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿರುವುದಾಗಿ ತಿಳಿದು ಬಂದಿದೆ. ಆರೋಪಿಯನ್ನು ನ.12 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಆರೋಪಿ ಉಡುಪಿ ಜಿಲ್ಲೆಯ ಶಿರ್ವದಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದು ಎರಡು ತಿಂಗಳು ಜೈಲು ಸೇರಿ ಇತ್ತಿಚೆಗೆ ಹೊರಬಂದಿದ್ದ ಎನ್ನಲಾಗಿದೆ. ಬೆಳ್ತಂಗಡಿ ಇನ್ ಸ್ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದಲ್ಲಿ ವೇಣೂರು ಸಬ್ ಇನ್ಸೆಕ್ಟರ್ ಓಮನ ತಂಡದ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.
