ಬೆಳ್ತಂಗಡಿ: ತಂದೆಯನ್ನು ಕೊಲೆಗೈದ ಪುತ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Spread the love

ಬೆಳ್ತಂಗಡಿ: ತಂದೆಯನ್ನು ಕೊಲೆಗೈದ ಪುತ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಳ್ತಂಗಡಿ: ತಂದೆಯನ್ನು ಕೊಲೆಗೈದ ಪುತ್ರನಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಶುಕ್ರವಾರ ತೀರ್ಪು ವಿಧಿಸಿದೆ.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಡುಮುಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಎಂಬವರನ್ನು ಕೊಲೆಗೈದ ಆರೋಪಿ ಪುತ್ರ ಹರೀಶ ಪೂಜಾರಿಗೆ (28) ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ. ಅಲ್ಲದೆ ಶ್ರೀಧರ ಪೂಜಾರಿಯ ಪತ್ನಿಗೆ ಸೂಕ್ತ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಹರೀಶ್ ಪೂಜಾರಿ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದು, ಅವರ ಮದುವೆಗೆ ಮನೆಯವರ ವಿರೋಧವಿತ್ತು. ಸಹೋದರಿಯ ಮದುವೆಯಾಗದೆ ನಿನ್ನ ಮದುವೆ ಮಾಡುವುದಿಲ್ಲ ಎಂದು ಶ್ರೀಧರ ಪೂಜಾರಿ ತನ್ನ ಪುತ್ರನಿಗೆ ಎಚ್ಚರಿಸಿದ್ದರು. ಇದರಿಂದ ತಂದೆ-ಮಗನ ಮಧ್ಯೆ ಮನಸ್ತಾಪ ಬೆಳೆದಿತ್ತು. ಅಲ್ಲದೆ ಹರೀಶ ಪೂಜಾರಿಯು ಮನೆಬಿಟ್ಟು ಪ್ರೇಯಸಿಯ ಜೊತೆ ಹೋಗಿದ್ದ. 3 ವಾರಗಳ ಬಳಿಕ ವಾಪಸ್ ಬಂದಾಗ ಮನೆಯೊಳಗೆ ಸೇರಿಸಲು ತಂದೆ ಶ್ರೀಧರ ಪೂಜಾರಿ ಆಕ್ಷೇಪಿಸಿದ್ದರು. ಅದೇ ಕಾರಣಕ್ಕೆ 2021ರ ಜ.18ರಂದು ಅವರಿಬ್ಬರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯಗೊಂಡಿತ್ತು.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಸಂದೇಶ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.


Spread the love