ಬೆಳ್ತಂಗಡಿ ನಾವೂರು ಕೊಲೆ ಪ್ರಕರಣ: ಗಂಡನನ್ನು ಕೊಂದರೂ ಪತ್ನಿ ಅಪರಾಧಿಯಲ್ಲ;
ಮಾನಸಿಕ ಅಸ್ವಸ್ಥತೆ ಹಿನ್ನೆಲೆ ನ್ಯಾಯಾಲಯದ ಮಹತ್ವದ ತೀರ್ಪು: ಯುವ ವಕೀಲ ವಿಕ್ರಮ್ ರಾಜ್ ವಾದಕ್ಕೆ ಜಯ
ಮಂಗಳೂರು: ಪತಿಯನ್ನೇ ಕೊಂದ ಪತ್ನಿಯ ಪ್ರಕರಣದಲ್ಲಿ, ಆರೋಪಿ ಎಲಿಯಮ್ಮ ಕೊಲೆ ಮಾಡಿದ್ದು ಸಾಬೀತಾದರೂ, ಆಕೆ ‘Delusional Disorder’ ನಿಂದ ಬಳಲುತ್ತಿದ್ದ ಕಾರಣ ಅಪರಾಧ ಮುಕ್ತಗೊಳಿಸಿದ ಘಟನೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ -೧ (ಪೋಕ್ಸೋ) ದಲ್ಲಿ ನಡೆದಿದ್ದು, ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ತೀರ್ಪು ನೀಡಿದ್ದಾರೆ.
ದಿನಾಂಕ 05-07-2022 ರಂದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ಬೆಳಗಿನ ಜಾವ 5:30 ಕ್ಕೆ ಯೋಹಾನನ್ ಎಂಬುವರನ್ನು ಅವರ ಪತ್ನಿ ಎಲಿಯಮ್ಮ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಬೆಳ್ತಂಗಡಿ ಪೊಲೀಸರು ದಾಖಲಿಸಿದ ಈ ಪ್ರಕರಣದ ವಿಚಾರಣೆ ವೇಳೆ, ಆರೋಪಿ ಎಲಿಯಮ್ಮ “ತಾನು ಕೊಂದಿರುವುದು ಹೌದು” ಎಂದು ಒಪ್ಪಿಕೊಂಡಿದ್ದರು. ಆದರೆ, ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಸಾಕ್ಷಿ ವಿಚಾರಣೆಯನ್ನು ಮುಂದುವರೆಸಿತ್ತು. ಸಾಕ್ಷಿದಾರರು ಆಕೆಯ ವಿರುದ್ಧ ಸಾಕ್ಷಿ ನುಡಿದಿದ್ದರು.
ವಿಚಾರಣೆಯ ಕ್ರಾಸ್ ಎಕ್ಸಾಮಿನೇಷನ್ ಹಂತದಲ್ಲಿ, ಆರೋಪಿ ಪರ ವಕೀಲರಾದ ವಿಕ್ರಮ್ ರಾಜ್ ಎ. ಅವರು ಆರೋಪಿಯ ವೈದ್ಯಕೀಯ ಹಿನ್ನೆಲೆಯನ್ನು ಅನಾವರಣಗೊಳಿಸಿದರು. ಎಲಿಯಮ್ಮ ಅವರು ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥತೆ ಮತ್ತು ಭ್ರಮೆಗಳಿಂದ (Delusional Disorder) ಬಳಲುತ್ತಿದ್ದರು ಎಂಬುದು ಸಾಬೀತಾಯಿತು. “ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ, ತಾನು ಮಾಡುತ್ತಿರುವ ಕೃತ್ಯವು ತಪ್ಪು ಅಥವಾ ಕಾನೂನು ಬಾಹಿರ ಎಂದು ತಿಳಿಯುವ ಸ್ಥಿತಿಯಲ್ಲಿ ಆರೋಪಿ ಇರಲಿಲ್ಲ. ಆದ್ದರಿಂದ ಆಕೆ ಅಪರಾಧ ಎಸಗಿಲ್ಲ,” ಎಂದು ವಕೀಲರು ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿ ದಿನಾಂಕ 23-12-2025 ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶರಾದ ಮೋಹನ ಜೆ.ಎಸ್., ಇಂದು ತೀರ್ಪನ್ನು ಪ್ರಕಟಿಸಿದ್ದಾರೆ. ಕೊಲೆ ಕೃತ್ಯ ಸಾಬೀತಾಗಿದೆ: ಆದರೆ ಆರೋಪಿ ಅಪರಾಧಿಕ ಹೊಣೆಯಿಂದ ಮುಕ್ತವಾಗಿದ್ದಾರೆ. ನ್ಯಾಯಾಲಯವು ಜೈಲು ಅಧೀಕ್ಷಕರಿಗೆ ಆದೇಶ ನೀಡಿ, ಆರೋಪಿಯನ್ನು ನಿಮ್ಹಾನ್ಸ್ಗೆ (NIMHANS) ಕಳುಹಿಸಿ, ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆಯಿಂದ ಸಮಾಜಕ್ಕೆ ಅಥವಾ ಆಕೆಗೆ ಅಪಾಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಆರೋಪಿ ಪರ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.
