ಬೆಳ್ತಂಗಡಿ: ನಿದ್ದೆ ಮಾತ್ರೆ ಸೇವಿಸಿದ್ದ ತಾಯಿ ಸಾವು, ಮಗ ಗಂಭೀರ
ಬೆಳ್ತಂಗಡಿ: ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ಧ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಭವಿಸಿದೆ.
ಮೃತರನ್ನು ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ|ಕುಂಞರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ (96) ಎಂದು ಗುರುತಿಸಲಾಗಿದ್ದು ಅವರ ಪುತ್ರ ಖ್ಯಾತ ಜಾನಪದ ಕಲಾವಿದ, ಶಿಕ್ಷಕ ಜಯರಾಂ ಕೆ (58) ಗಂಭೀರ ಸ್ಥಿತಿಯಲ್ಲಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಯಾಣಿ ಮತ್ತು ಜಯರಾಂ ಅವರ ಕೂಳೂರಿನ ಮನೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿರುವುದನ್ನು ಗಮನಿಸಿ ನೆರೆ ಹೊರೆಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಊರವರು ಸೇರಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿರುವುದು ಕಂಡು ಬಂದಿತ್ತು.
ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತೀವ್ರ ಘಟಕದಲ್ಲಿದ್ದ ತಾಯಿ ಕಲ್ಯಾಣಿ ಅವರು ಮೇ 12 ರಂದು ಸಂಜೆ ಕೊನೆಯುಸಿರೆಳೆದರು. ಮಗ ಜಯರಾಂ ಅವರ ಸ್ಥಿತಿ ಇನ್ನಷ್ಟು ವಿಷಮಿಸಿದ್ದರಿಂದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.