ಬೆಳ್ಳಾರೆ | ಅಕ್ರಮ ಗೋವಧೆ: ಮೂವರು ಆರೋಪಿಗಳ ಬಂಧನ
ಬೆಳ್ಳಾರೆ: ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದು, ಜಾನುವಾರು ಮಾಂಸ ಸೇರಿದಂತೆ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇ 29ರಂದು ಸಂಜೆ ಅಕ್ರಮ ಗೋವಧೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸಿಬ್ಬಂದಿಗಳೊಂದಿಗೆ ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ಪ್ರದೇಶಕ್ಕೆ ದಾಳಿ ನಡೆಸಿದರು.
ಈ ವೇಳೆ ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಯಿತು. ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ಕೆ. ಅಬ್ದುಲ್ ರಫೀಕ್ (37), ಅದ್ರಾಮ ಮಂತೂರು (41) ಹಾಗೂ ಅಬ್ದುಲ್ ಖಾದರ್ ಪಣೆಮಜಲು (57) ಎಂದು ಗುರುತಿಸಲ್ಪಟ್ಟಿದ್ದಾರೆ.
ಪೊಲೀಸರ ತನಿಖೆಯಲ್ಲಿ ಆರೋಪಿಗಳು ಯಾವುದೇ ಅಧಿಕೃತ ಪರವಾನಿಗೆ ಪಡೆಯದೇ ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಜಾನುವಾರು ಮಾಂಸ ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
