ಬೆಳ್ಳೂರು ಕ್ರಾಸ್ ಬಳಿ ರಸ್ತೆ ಅವಘಡ: ಇಬ್ಬರು ಸಾವು

Spread the love

ಬೆಳ್ಳೂರು ಕ್ರಾಸ್ ಬಳಿ ರಸ್ತೆ ಅವಘಡ: ಇಬ್ಬರು ಸಾವು

ಕೆ.ಆರ್.ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ಳೂರು ಕ್ರಾಸ್ ಸಮೀಪದಲ್ಲಿ ಬಿ.ಎಂ.ರಸ್ತೆಯಲ್ಲಿ ನಡೆದಿದೆ.

ಆಷಾಡ ಅಮಾವಾಸ್ಯೆ ಪೂಜೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಯಲ್ಲಿ ಈ ಘಟನೆ ನಡೆದಿದ್ದು, ಟೆಂಪೋ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಜಯರಾಮೇಗೌಡರ ಪುತ್ರ ಯೋಗೇಶ್(30), ಕೆ.ಆರ್.ಪೇಟೆ ಟೌನಿನ ಸುಭಾಶ್ ನಗರದ ವಿಜಯಕುಮಾರ್ ಮತ್ತು ಸುವರ್ಣ ದಂಪತಿಗಳ ಪುತ್ರಿ, ಬಿಎಸ್ಸಿ ವಿದ್ಯಾರ್ಥಿನಿ ಇಂಪನಾ(ಬೇಬಿ) (19) ಮೃತ ದುರ್ದೈವಿಗಳು.

ಆಷಾಢ ಅಮವಾಸ್ಯೆ ಹಿನ್ನಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ವಳಗೆರೆಮೆಣಸ ಗ್ರಾಮದಿಂದ ಒಂದೇ ಕುಟುಂಬದ ಏಳೆಂಟು ಮಂದಿ ಸಂಬಂಧಿಕರು ಟೆಂಪೋ ಮೂಲಕ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀ ಕ್ಷೇತ್ರದ ಬಳಿ ಇರುವ ಅಟ್ಟಿಲಕ್ಕಮ್ಮ ದೇವಾಲಯಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ಮನೆಯತ್ತ ಬರುತ್ತಿದ್ದರು.

ಬೆಳ್ಳೂರು ಕ್ರಾಸ್ ಸಮೀಪದ ಬಿ.ಎಂ.ರಸ್ತೆಯಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಮುಂಬದಿ ಸೀಟಿನಲ್ಲಿ ಕುಳಿತಿದ್ದ ಅಗ್ರಹಾರಬಾಚಹಳ್ಳಿ ನಿವಾಸಿ ಯೋಗೇಶ್ ಮತ್ತು ಸುಭಾಷ್‌ನಗರದ ನಿವಾಸಿ ಇಂಪನಾ ಅವರಿಗೆ ಗಂಭೀರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ಕುರಿತು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love