
ಬೇಟೆಗಾರರ ಗುಂಡೇಟಿಗೆ ಬಲಿಯಾಯಿತಾ ಕಾಡುಕೋಣ?
ಮೈಸೂರು: ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಮೇಲೆ ಗುಂಡಿನ ದಾಳಿ ಮುಂದುವರೆದಿದ್ದು, ಕೆಲವು ದಿನಗಳ ಹಿಂದೆ ಸಾಕಾನೆಯ ಮೇಲೆ ಗುಂಡು ಹಾರಿಸಿದ ಘಟನೆ ಮರೆಯುವ ಮುನ್ನವೇ ದುಷ್ಕರ್ಮಿಗಳು ಕಾಡುಕೋಣದ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆಚೌಕೂರು ವನ್ಯಜೀವಿ ವಲಯದ ದೇವಮಚ್ಚಿ ಶಾಖೆಯ ಸಿಂಗನೂರು ಗಸ್ತಿನ ಮೈಸೂರು- ಗೋಣಿಕೊಪ್ಪ ಹೆದ್ದಾರಿಯ ಬಳಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ಗುಂಡೇಟಿಗೆ ಅಂದಾಜು ಎಂಟು ವರ್ಷದ ಕಾಡುಕೋಣ ಮೃತಪಟ್ಟಿದೆ. ರಸ್ತೆ ಬದಿಯಲ್ಲಿ ಸತ್ತು ಬಿದ್ದಿದ್ದ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಗುಂಡೇಟಿನಿಂದ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ಕಾಡು ಕೋಣದ ಮೇಲೆ ಗುಂಡು ಹಾರಿಸಿದ ಪರಿಣಾಮ ಅದು ಸತ್ತು ಬಿದ್ದಿದೆ.
ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯಾಧಿಕಾರಿಗಳು, ಪಶುವೈದ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿ, ದೇವಮಚ್ಚಿ, ಶಾಖೆ ಎಸ್.ಟಿ.ಪಿ.ಎಫ್ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಗುಂಡು ಹಾರಿಸಿ ಹತ್ಯೆಗೈದ ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ.
ನಾಗರಹೊಳೆ ಉದ್ಯಾನ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿರುವ ಆರೋಪಗಳಿದ್ದು, ಕೆಲ ವರ್ಷಗಳ ಹಿಂದೆ ಕಾಡು ಕೋಣಗಳನ್ನು ಬೇಟೆ ಮಾಡಿದವರನ್ನು ಬಂಧಿಸಲಾಗಿತ್ತು. ಇನ್ನಾದರೂ ಅರಣ್ಯ ಇಲಾಖೆ ಇತ್ತ ನಿಗಾವಹಿಸಬೇಕಿದೆ.