
ಬೇನಾಮಿ ಆಸ್ತಿ ತನಿಖೆ ವಿಳಂಬ ಮಾಡಿದರೆ ಧರಣಿ: ಪ್ರಮೋದ್ ಮುತಾಲಿಕ್ ಎಚ್ಚರಿಕೆ
ಕಾರ್ಕಳ: ಬಿಜೆಪಿಯಲ್ಲಿ ಜವಾಬ್ದಾರಿ ಹೊಂದಿರುವ ವ್ಯಕ್ತಿ ಆದಾಯವಿಲ್ಲದಿದ್ದರೂ ತನ್ನ ಹಾಗೂ ಪತ್ನಿ ಹೆಸರಿನಲ್ಲಿ ಕೋಟ್ಯಂತರ ರೂ. ಆಸ್ತಿ ಖರೀದಿಸಿದ್ದು ಹೇಗೆ? ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು, ಬೇನಾಮಿ ಆಸ್ತಿ ತನಿಖೆ ವಿಳಂಬಿಸಿದರೆ ಲೋಕಾಯುಕ್ತ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಬೇನಾಮಿ ಆಸ್ತಿಗೆ ಸಂಬಂಧಿಸಿ ಫೆ. 28ರಂದು ಡಿ.ಸಿ.ಯವರಿಗೆ, ದೂರು, ಮಾ. 2ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮದಲ್ಲಿ 4.15 ಕೋ.ರೂ.ಗಳಿಗೆ 67.94 ಎಕ್ರೆ ಜಾಗವನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ. ಅವರಿಗೆ ಅಷ್ಟು ಆದಾಯ ಇಲ್ಲ. ಬೇನಾಮಿ ಹೆಸರಿನಲ್ಲಿ ಆದಂತಹ ಹಗರಣ ಇದು. ಇದರಲ್ಲಿ ಸಚಿವರ ಕೈವಾಡದ ಸಂಶಯ ಇದೆ. ಈ ಜಾಗ ಮುಂದೆ ಇಂಡಸ್ಟ್ರಿಯಲ್ ಏರಿಯಾ ಆಗುತ್ತದೆ ಎಂದು ಗೊತ್ತಿದ್ದೇ ಖರೀದಿ ಮಾಡಿ¨ªಾರೆ. ಇದು ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಇಂಡಸ್ಟ್ರಿಯಲ್ ಏರಿಯಾ ಎಂದು ಘೋಷಣೆ ಆಗಿ ಈಗ ಆ ಜಾಗದ ಕಿಮ್ಮತ್ತು ನಾಲ್ಕು ಪಟ್ಟು ಹೆಚ್ಚಿದೆ. ಇದು ಭ್ರಷ್ಟಾಚಾರ. ಇಂತಹ ಬೇನಾಮಿ ಆಸ್ತಿ ಈ ಕ್ಷೇತ್ರದಲ್ಲಿ ಸಾಕಷ್ಟಿವೆ. ಇದರ ವಿರುದ್ಧ ಸಮರ ಆರಂಭಿಸಿದ್ದೇನೆ ಎಂದು ಕಾರ್ಕಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಕೋಟಿ ಚೆನ್ನಯ, ಪರಶುರಾಮ ಥೀಂ ಪಾರ್ಕ್ ಮತ್ತು ಕಾರ್ಕಳ ಉತ್ಸವ ಇದೆಲ್ಲ ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತಮ ಕಾರ್ಯಗಳು. ಜನರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲಕರ. ಇದಕ್ಕೆ ಸಚಿವರಿಗೆ ಅಭಿನಂದನೆ. ಉಳಿದಂತೆ ಅಭಿವೃದ್ಧಿಯಲ್ಲಿ ಹಗರಣಗಳು ನಡೆದಿವೆ. ಇವುಗಳನ್ನೂ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ. ಹೆಬ್ರಿ ತಾಲೂಕಿನಲ್ಲಿ ಅಭಿವೃದ್ಧಿ ಏನಾಗಿದೆ ಎಂದು ಮುತಾಲಿಕ್ ಪ್ರಶ್ನಿಸಿದರು.
ಆಡಿಯೋ ಒಂದರಲ್ಲಿ ಗುತ್ತಿಗೆದಾರನೊಬ್ಬ ಸಚಿವ ಸುನಿಲ್ ಅವರಿಗೆ ಕಮಿಶನ್ ನೀಡಬೇಕು ಎಂದು ಹೇಳಿರುವುದನ್ನು ಕೇಳಿಸಿಕೊಂಡಿದ್ದೇವೆ. ಟೆಂಡರ್ ಬಿಡುಗಡೆ, ಬಿಲ್ ಮಾಡುವಾಗ ಹೀಗೆ ಪ್ರತಿಬಾರಿಯೂ ಕಮಿಶನ್ ನೀಡಬೇಕು. ಒಂದು ತಿಂಗಳಿನಲ್ಲಿ ಕೋಟ್ಯಾಂತರ ರೂ.ಗಳ ಟೆಂಡರ್ ತರಾತುರಿಯಲ್ಲಿ ಆಗಿದೆ. ಇಂಧನ ಇಲಾಖೆ ಭ್ರಷ್ಟವಾಗಿದೆ. ಕೆಪಿಟಿಸಿಎಲ್‌ನಲ್ಲಿ ವರ್ಗ, ಭಡ್ತಿ ಎಲ್ಲವೂ ಭ್ರಷ್ಟವಾಗಿದೆ ಎಂದು ಆರೋಪಿಸಿದರು.