
ಬೇರೆಯವರಿಗೆ ಸಿಕ್ಕಾಗ ವಿರೋಧಿಸುವ ಪ್ರವೃತ್ತಿಯನ್ನು ಖಂಡಿಸಬೇಕು: ಮುನಿಸಿಕೊಂಡವರಿಗೆ ಬಿಎಸ್‌ವೈ ಚಾಟಿ
ಕುಂದಾಪುರ: ಯಾರೋ ಇಬ್ಬರು ನಮ್ಮ ಅಭ್ಯರ್ಥಿ ವಿರುದ್ದ ಹಗುರವಾಗಿ ಮಾತನಾಡಿ ಚುನಾವಣೆಯಲ್ಲಿ ಸೋಲಿಸುವುದು ನಿಶ್ಚಿತ ಎಂದಿದ್ದಾರೆ. ಅವರ ಮಾತುಗಳಿಗೆ ನೀವು ಕಿವಿ ಕೊಡಬೇಡಿ. ನಾನು ಮತ್ತು ಸಂಸದ ಬಿವೈ ರಾಘವೇಂದ್ರ ಅವರು ಸದಾ ನಿಮ್ಮೊಂದಿಗೆ ಇರುತ್ತೇವೆ. ನಾವೆಲ್ಲರೂ ನಮ್ಮ ಅಭ್ಯರ್ಥಿ ಪರ ಇರಬೇಕಾದರೆ ಯಾರೋ ಒಬ್ಬಿಬ್ಬರು ಚುನಾವಣೆಯ ಸೋಲು-ಗೆಲುವನ್ನು ನಿಶ್ಚಯ ಮಾಡುವುದಕ್ಕೆ ಆಗೋದಿಲ್ಲ. ತನಗೆಲ್ಲವೂ ಬೇಕು. ಬೇರೆಯವರಿಗೆ ಸಿಕ್ಕಾಗ ಅದನ್ನು ವಿರೋಧ ಮಾಡುವ ಪ್ರವೃತ್ತಿಯನ್ನು ನಾವೆಲ್ಲರೂ ಖಂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂಪ್ಪನವರು ಹೇಳಿದರು.
ಶನಿವಾರ ಮಧ್ಯಾಹ್ನ ವಂಡ್ಸೆಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬೈಂದೂರು ಬಿಜೆಪಿಯಲ್ಲಿ ಟಿಕೆಟ್ ತಪ್ಪಿದ ಹಿನ್ನೆಲೆ ಮುನಿಸಿಕೊಂಡವರಿಗೆ ಈ ಮೂಲಕ ತಿರುಗೇಟು ನೀಡಿದರು.
ಈಗಾಗಲೇ ಬೇಡಿಕೆ ಬಂದಂತೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಶಾಲೆಯನ್ನು ನಿರ್ಮಾಣ ಮಾಡಿಸಿಕೊಡುತ್ತೇವೆ. ಶಿಕ್ಷಣ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಹಕಾರ ದೊರೆಯಬೇಕಾಗಿದೆ. ಏನು ಹೇಳಿದ್ದೇವೋ ಎಲ್ಲವನ್ನೂ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮುಂದೆ ಬರುವ ನಮ್ಮ ಸರ್ಕಾರ ಮಾಡುತ್ತದೆ ಎಂದು ಅವರು ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕದ ಕುರಿತು ಅತೀ ಹೆಚ್ಚು ವಿಶ್ವಾಸವಿದೆ. ಕರ್ನಾಟಕದಲ್ಲಿ 130 ರಿಂದ 135 ಸೀಟು ಗೆದ್ದು ಕರ್ನಾಟಕವನ್ನು ಮಾದರಿ ರಾಜ್ಯ ಮಾಡಬೇಕೆಂದು ಮೋದಿ, ಅಮಿತ್ ಶಾ, ನಡ್ಡಾ ಅವರು ಪ್ರಯತ್ನ ಮಾಡುತ್ತಿದ್ದಾರೆ. ಬೈಂದೂರು ಸೇರಿ 130ಕ್ಕೂ ಅಧಿಕ ಸೀಟನ್ನು ಗೆದ್ದು ಸರ್ಕಾರವನ್ನು ರಚನೆ ಮಾಡಿ ನಿಮ್ಮ ಅಪೇಕ್ಷೆಯನ್ನು ಪೂರೈಸುತ್ತೇನೆ ಎಂದು ನಾನು ಪ್ರಧಾನಿ ಮೋದಿಯವರಿಗೆ ಭರವಸೆ ಕೊಟ್ಟಿದ್ದೇನೆ. ಈಗಾಗಲೇ ಸುಮಾರು 75 ವಿಧಾನಸಭಾ ಕ್ಷೇತ್ರ ಸುತ್ತಿ ಇಲ್ಲಿಗೆ ಬಂದಿದ್ದೇನೆ. ರಾಜ್ಯದ ಜನರ ನಾಡಿ ಮಿಡಿತ ಗೊತ್ತಿದೆ. ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಗುರುರಾಜ್ ನಿಮ್ಮೆಲ್ಲರ ಆಶೀರ್ವಾದದಿಂದ 25,000 ಅಂತರದಲ್ಲಿ ಗೆದ್ದೇ ಗೆಲ್ಲುತ್ತಾರೆ. ಆ ಬಗ್ಗೆ ಯಾರಿಗೂ ಸಂಶಯ ಬೇಡ ಎಂದರು.
ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ನಿನಗೆ ಈ ರಾಜಕೀಯದ ಪೆಟ್ಟುಗಳನ್ನು, ಪಟ್ಟುಗಳನ್ನು ತಡೆದುಕೊಳ್ಳಲು ಸಾಧ್ಯನಾ ಎಂದು ನನಗೆ ಹಲವರು ಕೇಳಿದರು. ನನಗೆ ಒಂದು ಗೊತ್ತಿದೆ. ರಾಜಕೀಯದ ಪೆಟ್ಟುಗಳು, ಪಟ್ಟುಗಳು ನಾಯಕರು ಕೊಡಬಹುದು, ರಾಜಕೀಯದ ದೊಡ್ಡ ದೊಡ್ಡ ವ್ಯಕ್ತಿಗಳು ಕೊಡಬಹುದು. ಆದರೆ ಕಾರ್ಯಕರ್ತನಿಗೆ ಕಾಪಾಡುವ ತಾಕತ್ತು ಇರುವವರೆಗೆ ಯಾವ ಪೆಟ್ಟು, ಪಟ್ಟು ನನಗೆ ತಾಕುವುದಿಲ್ಲ ಎಂದರು.
ಮಾಜಿ ಶಾಸಕ ಬಿ ಅಪ್ಪಣ್ಣ ಹೆಗ್ಡೆ ಮಾತನಾಡಿ ದಕ್ಷ ಆಡಳಿತದಿಂದ ಬಿಜೆಪಿ ದೇಶದಲ್ಲಿ ಭದ್ರವಾಗಿ ಉಳಿದಿದೆ. ಪಕ್ಷದಿಂದ ಲಾಭ ಪಡೆದು ಹೋದವರು ಲೀಡರ್ ಗಳಲ್ಲಾ. ಅವರೆಲ್ಲರೂ ಸ್ವಯಂ ಘೋಷಿತ ಲೀಡರ್ ಗಳು ಎಂದರು.
ಮಾಜಿ ಶಾಸಕರಾದ ಲಕ್ಷ್ಮೀನಾರಾಯಣ ಮಾತನಾಡಿದರು
ಮುಂದುವರಿದ ಮುನಿಸು: ಬಿಎಸ್ವೈ ಬಂದರೂ ಬಿಎಮ್ಎಸ್ ಗೈರು!
ಬಿಎಸ್ ಯಡಿಯೂರಪ್ಪನವರ ಪರಮಾಪ್ತರಾಗಿ ಗುರುತಿಸಿಕೊಂಡಿದ್ದ ಬೈಂದೂರಿನ ಹಾಲಿ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿಯವರು ಬೈಂದೂರು ಕ್ಷೇತ್ರದ ಪ್ರಚಾರಕ್ಕಾಗಿ ಖುದ್ದು ಯಡಿಯೂರಪ್ಪನವರು ಬಂದರೂ ವಂಡ್ಸೆಯ ಮನೆ ಸಮೀಪದ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ತನ್ಮೂಲಕ ಯಡಿಯೂರಪ್ಪನವರ ಆಗಮನದ ಬಳಿಕ ಬಿಎಮ್ಎಸ್ ಅವರ ಮುನಿಸು ಕಡೆಮೆಯಾಗಬಹುದು ಎನ್ನುವ ಪಕ್ಷದ ಪ್ರಮುಖರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.
ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಚುನಾವಣಾ ಉಸ್ತುವಾರಿಗಳಾದ ಬ್ರಿಜೇಶ್ ಚೌಟ, ಉನ್ನೀಕೃಷ್ಣನ್, ರಾಜ್ಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, , ಮುಖಂಡರಾದ ಸದಾನಂದ ಉಪ್ಪಿನಕುದ್ರು, ಮಂಡಲ ಮಾಜಿ ಅಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ, ಪ್ರಮುಖರಾದ ಹರ್ಕೂರು ಮಂಜಯ್ಯ ಶೆಟ್ಟಿ, ಪ್ರಿಯದರ್ಶಿನಿ ಬಿಜೂರು, ಮಾಲತಿ ನಾಯ್ಕ್, ಶ್ಯಾಮಲಾ ಕುಂದರ್, ಶೋಭಾ ಜಿ ಪುತ್ರನ್, ಭಾಗೀರಥಿ ಮೊದಲಾದವರು ಉಪಸ್ಥಿತರಿದ್ದರು.