ಬೇಲೂರಲ್ಲಿ ರೈತರ ನಿದ್ದೆಗೆಡಿಸಿದ ಕಾಡಾನೆಗಳು

Spread the love

ಬೇಲೂರಲ್ಲಿ ರೈತರ ನಿದ್ದೆಗೆಡಿಸಿದ ಕಾಡಾನೆಗಳು

ಬೇಲೂರು: ಮಲೆನಾಡು ಭಾಗಗಳಾದ ಅರೇಹಳ್ಳಿ, ಹುನುಗನಹಳ್ಳಿ, ತುಂಬುದೇವನಹಳ್ಳಿ, ಚೀಕನಹಳ್ಳಿ ಮೊದಲಾದ ಕಡೆಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ರೈತ ತೋಟ, ಹೊಲ ಗದ್ದೆಗಳಲ್ಲಿರುವ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಅರಣ್ಯದಿಂದ ಆಹಾರ ಅರಸಿ ಬರುತ್ತಿರುವ ಕಾಡಾನೆಗಳ ಹಿಂಡು ನೇರವಾಗಿ ಕಾಫಿ ತೋಟ, ಗದ್ದೆಗಳಿಗೆ ರಾಜಾರೋಷವಾಗಿ ನುಗ್ಗುತ್ತಿದ್ದು ಬೆಳೆಯನ್ನೆಲ್ಲ ಹಾಳು ಮಾಡುತ್ತಿವೆ. ಕೊರೊನಾದ ಸಂಕಷ್ಟದಲ್ಲಿಯೂ ರೈತರು ಭತ್ತ, ಶುಂಠಿಯನ್ನು ಬೆಳೆದಿದ್ದು ಅದನ್ನು ತುಳಿದು ತಿಂದು ನಾಶ ಮಾಡಿದ್ದರಿಂದ ನಷ್ಟ ಅನುಭವಿಸಿರುವ ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಇನ್ನೊಂದೆಡೆ ಕಾಫಿ, ಮೆಣಸು, ಬಾಳೆಯನ್ನು ಕೂಡ ನಾಶ ಮಾಡಿದ್ದು ಇದರಿಂದ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಈ ಕುರಿತಂತೆ ತುಂಬದೇವನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಬಳದಕಲ್ಲು ಗ್ರಾಮದ ರಂಜಿತ್ ಮಾತನಾಡಿ ನಮ್ಮ ಗ್ರಾಮದಲ್ಲಿ ಸುಮಾರು ಹದಿನೈದು ದಿನಗಳಿಂದಲೂ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ರೈತರು ಹಾಗೂ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಗೆ ನಾವು ಹಲವು ಬಾರಿ ಮನವಿ ಮಾಡಿ ಕಾಡಾನೆಗಳನ್ನು ಕಾಡಿಗಟ್ಟಲು ಮನವಿ ಮಾಡಿದರೂ ಅದಕ್ಕೆ ಸ್ಪಂದಿಸಿಲ್ಲ.

ಅರೇಹಳ್ಳಿ ಭಾಗದ ಉಪವಲಯ ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳು ನೀಡುತ್ತಿರುವ ಉಪದ್ರವದ ಬಗ್ಗೆ ಮಾಹಿತಿ ಇದ್ದರೂ ಸ್ಪಂದಿಸುತ್ತಿಲ್ಲ ನಿಮ್ಮ ತೋಟಕ್ಕೆ, ಮನೆಗಳ ಬಳಿ ಕಾಡಾನೆ ಬಂದರೆ ನಾವೇನು ಮಾಡಲು ಸಾಧ್ಯ ಎಂದು ಬೇಜವಬ್ದಾರಿಯ ಪ್ರಶ್ನೆ ಕೇಳುತ್ತಾರೆ. ಇನ್ನಾದರೂ ನಾಡಿಗೆ ಬಂದಿರುವ ಕಾಡಾನೆಗಳನ್ನು ಕಾಡಿಗೆ ಮರಳಿ ಅಟ್ಟಬೇಕು ತಪ್ಪಿದರೆ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.


Spread the love

Leave a Reply