ಬೇಲೂರಿನಲ್ಲಿ ಕಾಫಿ ಬೆಳೆಗಾರರಿಂದ ಪ್ರತಿಭಟನೆ

Spread the love

ಬೇಲೂರಿನಲ್ಲಿ ಕಾಫಿ ಬೆಳೆಗಾರರಿಂದ ಪ್ರತಿಭಟನೆ

ಬೇಲೂರು: ವಿದ್ಯುಚ್ಛಕ್ತಿ ಕೇಂದ್ರದಲ್ಲಿನ ಖಾಸಗಿಕರಣ, ರೈತರ ಐಪಿ ಸೆಟ್‌ಗಳಿಗೆ ಮೀಟರ್ ಅಳವಡಿಕೆ, ಅವೈಜ್ಞಾನಿಕ ಬೆಲೆಯಿಂದ ಕೃಷಿಕರ ತತ್ತರ, ಮೀತಿ ಮೀರಿದ ವಿದ್ಯುತ್ ದರ, ಇಲಾಖೆ ಅಧಿಕಾರಿಗಳಿಂದ ಉಡಾಪೆ ವರ್ತನೆ ಹೀಗೆ ನಾನಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ಕಾಫಿ ಬೆಳೆಗಾರರು ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನೆಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತಕ್ಕೆ ಆಗಮಿಸಿ ವಿದ್ಯುತ್ ಇಲಾಖೆ ಅವೈಜ್ಞಾನಿಕ ದರ ಮತ್ತು ನೀತಿ ನಿಯಮಗಳ ವಿರುದ್ಧ ಕಿಡಿಕಾರಿದ ಅವರು ತಕ್ಷಣವೇ ಸರ್ಕಾರ ಮದ್ಯೆ ಪ್ರವೇಶಿಸಬೇಕು ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಈ ಸಂದರ್ಭ ಮಾತನಾಡಿದ ಹಾಸನ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮೀಗೌಡ, ಸರ್ಕಾರವೇ ಸದ್ಯ 10 ಹೆಚ್ಪಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿ ಆದೇಶ ಹೊರ ಬರಬೇಕಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಇಲಾಖೆ ತನ್ನ ಸಣ್ಣಬುದ್ದಿಯಿಂದ ಮಲೆನಾಡು ಭಾಗದ ಮೂರು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಮನಃಬಂದತೆ ರೂ 26 ಕೋಟಿ ವಿದ್ಯುತ್ ಬಿಲ್ಲು ಹಾಕಿದೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದ ಅವರು ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಪ್ರದೇಶದ ರೈತರ ಮೇಲೆ ಸರ್ಕಾರ ತನ್ನ ದಬ್ಬಾಳಿಕೆ ನೀತಿಯನ್ನು ನಿರಂತರವಾಗಿ ಪ್ರದರ್ಶನ ಮಾಡುತ್ತಿದೆ. ಈ ಕೆಲಸ ಧೋರಣೆಯನ್ನು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸುತ್ತದೆ. ಶೀಘ್ರವೇ ರೂ 26 ಕೋಟಿ ಹಣ ಮನ್ನಾ ಮತ್ತು 10 ಹೆಚ್ಪಿ ತನಕ ಉಚಿತ ಕೃಷಿಕರಿಗೆ ವಿದ್ಯುತ್ ನೀಡುವ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೋಗಮಲ್ಲೇಶ ಮಾತನಾಡಿ, ರಾಜ್ಯದಲ್ಲಿನ ರೈತರು ಅತಿವೃಷ್ಟಿಯಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳುವುದು ಕಷ್ಟದ ವೇಳೆಯಲ್ಲಿ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಮೂಲಕ ದೇಶದ ಅನ್ನದಾತನ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ರೈತರಿಗೆ ಮೂಲ ಭೂತವಾಗಿ ನೀರು ಮತ್ತು ವಿದ್ಯುತ್ ಸೇರಿಂದತೆ ಇನ್ನಿತರ ಸವಲತ್ತುಗಳನ್ನು ನೀಡಬೇಕು ಆದರೆ ಸರ್ಕಾರ ಮಾತ್ರ ಕೃಷಿಕರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಡಾ.ಸ್ವಾಮಿನಾಥನ್ ವರದಿಯನ್ನು ಕೂಡ ಅನುಷ್ಠಾನ ಮಾಡುವಲ್ಲಿ ಮೀನಾ ಮೇಷ ಎಣಿಸುತ್ತಿದೆ. ಮಲೆನಾಡು ಭಾಗ ಕಾಫಿ ಬೆಳೆಗಾರರಿಗೆ ಮನಃ ಬಂದಂತೆ 10 ಲಕ್ಷ 12 ಲಕ್ಷದ ತನಕ ವಿದ್ಯುತ್ ಬಿಲ್ಲು ಹಾಕಿದರೆ ಅವರ ಪರಿಸ್ಥಿತಿ ಏನಾಗಬಹುದು ಎಂಬ ಬಗ್ಗೆ ಪರಿಜ್ಞಾನವಿಲ್ಲದೆ ವರ್ತನೆ ಮಾಡುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು. ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ಕಾಫಿ ಬೆಳೆಗಾರರು ಪ್ರತಿಭಟನೆಯಲ್ಲಿ ಭಾವಹಿಸಿದ್ದರು.


Spread the love