
ಬೇಲೂರು: ವೃದ್ದೆಯ ಮೇಲೆ ಮಂಗ ದಾಳಿ
ಬೇಲೂರು: ಇತ್ತೀಚೆಗೆ ಮಂಗಗಳ ಹಾವಳಿ ಹೆಚ್ಚುತ್ತಿದ್ದು, ಮನುಷ್ಯರ ಮೇಲೂ ದಾಳಿ ನಡೆಸುತ್ತಿರುವ ಪ್ರಕರಣ ವರದಿಯಾಗುತ್ತಿದೆ. ಈ ನಡುವೆ ಮನೆಯ ಮುಂದೆ ಕೆಲಸ ಮಾಡುತ್ತಿದ್ದ ವೃದ್ದೆಯ ಮೇಲೆ ಮಂಗ ದಾಳಿ ನಡೆಸಿದ ಪರಿಣಾಮ ವೃದ್ಧೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾಳಗರೆ ಗ್ರಾಮದಲ್ಲಿ ನಡೆದಿದೆ.
ಕೋಗಿಲಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳಗರೆ ಗ್ರಾಮದ ಪಾರ್ವತಮ್ಮ ಎಂಬ ವೃದ್ಧೆ ಗಾಯಗೊಂಡು ಆಸ್ಪತ್ರೆ ಸೇರಿದವರು. ಇವರು ಎಂದಿನಂತೆ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಮಂಗ ಏಕಾಏಕಿ ದಾಳಿ ನಡೆಸಿದ ಪರಿಣಾಮ ವೃದ್ದೆ ಪಾರ್ವತಮ್ಮನ ತಲೆ ಮತ್ತು ಕೈಗಳಿಗೆ ಪೆಟ್ಟಾಗಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿಚಾರವಾಗಿ ಗ್ರಾಮಸ್ಥ ಮಾಳಗೆರೆ ತಾರಾನಥ್ ಮಾತನಾಡಿ, ಮಾಳಗೆರೆ ಗ್ರಾಮದಲ್ಲಿ ಒಂಟಿ ಮಂಗನ ಉಪಟಳದಿಂದ, ನಾಗರಿಕರು ಹೈರಾಣಾಗಿದ್ದು, ಆತಂಕದಿಂದ ಕಾಲ ಕಳೆಯುವಂತಾಗಿದೆ. ಕಳೆದ ಒಂದು ವಾರದಿಂದ ಈ ಒಂಟಿ ಮಂಗನ ಉಪಟಳ ಹೆಚ್ಚಾಗಿದೆ, ಇನ್ನೂ ನಾವುಗಳು ಮಂಗನ ಮೇಲೆ ಹಲ್ಲೆ ಮಾಡಿದರೆ ಪ್ರಕರಣ ದಾಖಲಿಸುವ ಅಧಿಕಾರಿಗಳು ಮಾತ್ರ ಮಂಗನ ಹಿಡಿಯಲು ಮುಂದಾಗುತ್ತಿಲ್ಲ, ಈ ಕೂಡಲೇ ಈ ಒಂಟಿ ಮಂಗನನ್ನು ಹಿಡಿಯ ಬೇಕೆಂದು ಆಗ್ರಹಿಸಿದ್ದಾರೆ.