ಬೈಂದೂರಿನಲ್ಲಿ ಡಿಕೆಶಿ ಸಮ್ಮುಖ ಕಾಂಗ್ರೆಸ್‌ ಸೇರ್ಪಡೆಯ ಪರ್ವ

Spread the love

ಬೈಂದೂರಿನಲ್ಲಿ ಡಿಕೆಶಿ ಸಮ್ಮುಖ ಕಾಂಗ್ರೆಸ್‌ ಸೇರ್ಪಡೆಯ ಪರ್ವ

ಕೈ ಹಿಡಿದ ಬೈಂದೂರಿನ ಬಿಜೆಪಿಯ ಘಟಾನುಘಟಿ ನಾಯಕರು. ಬಿಜೆಪಿ ಕುಯುಕ್ತಿಯನ್ನು ಬಯಲಿಗೆಳೆಯುವೆ: ಬಿಜೆಪಿ ಟಿಕೆಟ್‌ ಆಕಾಂಕ್ಷಿ ಬಾಬು ಹೆಗ್ಡೆ

 
ಕುಂದಾಪುರ: ಬೈಂದೂರು, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಬೈಂದೂರು ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿ ತೆಗ್ಗರ್ಸೆ ಬಾಬು ಹೆಗ್ಡೆ ಸೇರಿದಂತೆ ಕೆಲ ಘಟಾನುಘಟಿ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.


ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಪಕ್ಷದ ಬಾವುಟ ನೀಡಿ ಬಿಜೆಪಿ ನಾಯಕರನ್ನು ಬರಮಾಡಿಕೊಂಡರು. ಈ ಬಾರಿ ವಿಧಾನಸಣೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಾಬು ಹೆಗ್ಡೆ, ಜಿ.ಪಂ ಮಾಜಿ ಸದಸ್ಯ ಯಡ್ತರೆ ಶಂಕರ್‌ ಪೂಜಾರಿ, ಕುಂದಾಪುರ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ, ತಾ.ಪಂ ಮಾಜಿ ಸದಸ್ಯ ಸದಾಶಿವ ಪಡುವರಿ, ಮೌಲಾನಾ ದಸ್ತಗಿರಿ ಸಾಹೇಬ್‌, ವಂಡ್ಸೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್‌ ಶೆಟ್ಟಿ ಮೊದಲಾದವರು ತಮ್ಮ ನೂರಾರು ಬೆಂಬಲಿಗರೊಡನೆ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಈ ವೇಳೆಯಲ್ಲಿ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ಬಾಬು ಹೆಗ್ಡೆ, 32 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದು, ಎಲ್ಲಾ ಚುನಾವಣೆಯಲ್ಲೂ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷವನ್ನು ಕಟ್ಟಬೇಕು ಎನ್ನುವ ನೆಲೆಯಲ್ಲಿ 2008 ರಲ್ಲಿ ಬ್ಯಾಂಕ್‌ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. 2013ರಲ್ಲಿ ವಿಧಾನಸಭೆಗೆ ನಿಲ್ಲುವ ಸೂಚನೆ ಬಂದಿತ್ತಾದರೂ ಕೊನೆ ಕ್ಷಣದಲ್ಲಿ ತಪ್ಪಿ ಹೋಯಿತು. 2018 ರಲ್ಲಿ ಅವಕಾಶ ಸಿಗಲಿಲ್ಲ. ಮತ್ತೆ ಈ ಬಾರಿಯ ಚುನಾವಣೆಯಲ್ಲಿ ಕೊನೆ ಕ್ಷಣದವರೆಗೂ ಟಿಕೆಟ್‌ ಕೊಡುವ ಸೂಚನೆ ಕೊಟ್ಟು ಬಳಿಕ ತಪ್ಪಿಸಿದರು. ಚುನಾವಣೆಗೆ ನಿಲ್ಲುವ ಎಲ್ಲಾ ಅರ್ಹತೆಗಳಿದ್ದರೂ ಯಾಕೆ ಅವಕಾಶ ಕೊಟ್ಟಿಲ್ಲ ಎಂದು ನಾಯಕರಲ್ಲಿ ಪ್ರಶ್ನಿಸಿದ್ದೆ. ನಮ್ಮಿಂದ ತಪ್ಪಾಗಿದೆ ಸುಧಾರಿಸಿಕೊಳ್ಳಿ ಎಂದು ಸಮಜಾಯಿಷಿದರು.


ಬಿಜೆಪಿಯ ಕುಯುಕ್ತಿಯನ್ನು ಬಯಲಿಗೆಳೆಯುವೆಬಿಜೆಪಿ ನನಗೆ ನಂಬಿಸಿ ಮೋಸ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದಾಗ ಯಾವುದೇ ಷರತ್ತನ್ನು ಪಕ್ಷದ ನಾಯಕ ಮುಂದೆ ಇಡಲಿಲ್ಲ. ಚುನಾವಣಾ ರಾಜಕೀಯಕ್ಕೂ ಬರುವುದಿಲ್ಲ. ನನ್ನ ಹಿರಿತನಕ್ಕೆ ಗೌರವ ಕೊಡುವುದಾದರೆ ಪಕ್ಷಕ್ಕೆ ಬರುವೆ ಎಂಇದ್ದೇನೆ. ಈ ಚುನಾವಣೆಯಲ್ಲಿ ಗೋಪಾಲ ಪೂಜಾರಿಯವರನ್ನು ಖಂಡಿತವಾಗಿಯೂ ಗೆಲ್ಲಿಸುತ್ತೇವೆ. ಸರಕಾರ ರಚಿಸಲು ಬೈಂದೂರಿನಿಂದ ಒಂದು ಸ್ಥಾನ ಖಂಡಿತಾ ಸಿಗಲಿದೆ ಎಂದರು.

ಮಾಜಿ ಜಿ.ಪಂ ಸದಸ್ಯ ಶಂಕರ್‌ ಪೂಜಾರಿ ಮಾತನಾಡಿ, ಕಾಂಗ್ರೆಸ್ ನನ್ನ ಸ್ವಂತ ಮನೆ. ಮೊದಲು 20-25 ವರ್ಷ ಕಾಂಗ್ರೆಸ್ಸಿನಲ್ಲಿದ್ದು ದುಡಿದ ಖುಷಿಯಿದೆ. ನಮ್ಮೊಳಗೆ ಭಿನ್ನಾಭಿಪ್ರಾಯಗಳು ಬಂದು ಪಕ್ಷದಿಂದ ದೂರವಾದೆ. ಆ ಬಳಿಕ ಬಿ.ಎಂ ಸುಕುಮಾರ್ ಶೆಟ್ಟಿಯವರು ಕರೆದಾಗ ಅವರ ಮೇಲಿನ ಗೌರವದಿಂದ ಬಿಜೆಪಿ ಸೇರಿದೆ. ಅವರು ಒಳ್ಳೆ ರೀತಿ ನಡೆಸಿಕೊಂಡರು. ಆದರೆ ಈ ಬಾರಿ ಬಿಜೆಪಿ ಪಕ್ಷವು ಸುಕುಮಾರ ಶೆಟ್ಟಿ, ಬಾಬು ಹೆಗ್ಡೆಯವರನ್ನು ನಡೆಸಿಕೊಂಡ ರೀತಿಯಿಂದ ಕಾರ್ಯಕರ್ತರ ಕಡೆಗಣನೆ ತಿಳಿದಿದೆ. ಅದಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.


ತಾ.ಪಂ ಮಾಜಿ ಸದಸ್ಯ ಸದಾಶಿವ ಪಡುವರಿ ಮಾತನಾಡಿ, 1991ರಲ್ಲಿ ಬಿಜೆಪಿ ಸೇರಿದ ಬಳಿಕ 4 ಬಾರಿ ಗ್ರಾ.ಪಂ ಹಾಗೂ ಒಂದು ಬಾರಿ ತಾ‌ಪಂ ಸದಸ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ 32 ವರ್ಷ ಕಾಲ ಸೇವೆ ಸಲ್ಲಿಸಿದ್ದೇನೆ. ಬಿಜೆಪಿಯಲ್ಲಿ ದೀರ್ಘಕಾಲದ ಸೇವೆಗೆ ಬೆಲೆಯಿಲ್ಲ. 50 ವರ್ಷದ ಮೇಲಿನವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ. ವೃದ್ಧಾಶ್ರಮಕ್ಕೆ ಸೇರಿಸಿದಂತೆ ಮೂಲೆಗುಂಪು ಮಾಡುತ್ತಾರೆ. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ. ಗೋಪಾಲ ಪೂಜಾರಿ ಗೆದ್ದು ಸಚಿವರಾಗುತ್ತಾರೆ ಎಂದು ಅಭಿಮತ ವ್ಯಕ್ತಪಡಿಸಿದರು.

ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ ಮಾತನಾಡಿ, ಹಲವು ಬಾರಿ ಕಾಂಗ್ರೆಸ್ ಸೇರಲು ಬುಲಾವ್ ಇತ್ತು. ಇದೀಗ ಸುಸಮಯ ಎಂದು ಸೇರ್ಪಡೆಯಾಗಿರುವೆ. ಗೋಪಾಲ ಪೂಜಾರಿಯವರನ್ನು ಗೆಲ್ಲಿಸಲು ರಾತ್ರಿ ಹಗಲು ದುಡಿಯೋಣ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ನಂಬಿ ನೂರಾರು ಕಾರ್ಯಕರ್ತರು ಬಂದಿದ್ದು ಇಲ್ಲಿ ಹೊಸಬರು ಹಳಬರು ಪ್ರಶ್ನೆ ಬೇಡ. ಚುನಾವಣಾ ಸಮಯದಲ್ಲಿ ಕಷ್ಟಕಾಲದಲ್ಲಿ ಕೈ ಹಿಡಿದವರೆಲ್ಲರೂ ನಾಯಕರು. ಮನೆ ಕಟ್ಟಿದವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ. ಪಕ್ಷಕ್ಕೆ ಬರುವವರನ್ನು ಹೃದಯ ಶ್ರೀಮಂತಿಕೆಯಿಂದ ಬರಮಾಡಿಕೊಂಡು ಹಿರಿಯರ ಅನುಭವ, ಮಾರ್ಗದರ್ಶನದಲ್ಲಿ ಶ್ರಮವಹಿಸಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

ಈ ವೇಳೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ ಗೋಪಾಲ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎ ಗಫೂರ್, ಯುಬಿ ಶೆಟ್ಟಿ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಕುಮಾರ್‌, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್‌ ಶೆಟ್ಟಿ, ಮುಖಂಡರಾದ ರಾಜು ಪೂಜಾರಿ, ಗೌರಿ ದೇವಾಡಿಗ, ಮಂಜುಳಾ ದೇವಾಡಿಗ ಮೊದಲಾದವರು ಇದ್ದರು.


Spread the love