ಬೈಂದೂರು ಕ್ಷೇತ್ರದಲ್ಲಿ 19000 ಕ್ಕೂ ಅಧಿಕ ಮತದಾರರ ಹೆಸರು ತೆಗೆದು ಹಾಕಲು ವ್ಯವಸ್ಥಿತ ಷಡ್ಯಂತ್ರ – ಗೋಪಾಲ ಪೂಜಾರಿ

Spread the love

ಬೈಂದೂರು ಕ್ಷೇತ್ರದಲ್ಲಿ 19000 ಕ್ಕೂ ಅಧಿಕ ಮತದಾರರ ಹೆಸರು ತೆಗೆದು ಹಾಕಲು ವ್ಯವಸ್ಥಿತ ಷಡ್ಯಂತ್ರ – ಗೋಪಾಲ ಪೂಜಾರಿ

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಅಂದಾಜು 19,000 ಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ನಿರ್ದಿಷ್ಟ ಜಾತಿಯ ಮತದಾರರ ಹೆಸರನ್ನು ಅವರ ವಾಸ್ತವ್ಯ ಗ್ರಾಮದ ಮತದಾರರ ಪಟ್ಟಿಯಿಂದ ತೆಗೆದು‌ ಸಂಬಂಧವೇ ಇಲ್ಲದ ಗ್ರಾಮಗಳಿಗೆ ವರ್ಗಾಯಿಸಲಾಗಿದೆ. ಕಂದಾಯ ಇಲಾಖೆಯ ಚುನಾವಣಾ ವಿಭಾಗದಲ್ಲಿ ಉಂಟಾಗಿರುವ ಈ ಎಲ್ಲ ಗೊಂದಲಗಳಿಗೆ ಜಿಲ್ಲಾಧಿಕಾರಿಯವರು, ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಲೋಪವನ್ನು ಸರಿಪಡಿಸಬೇಕು. ಅಲ್ಲದೇ ಇಂತಹ ರಾಜಕೀಯ ಷಡ್ಯಂತರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಬೈಂದೂರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಕಟ್‌ಬೇಲ್ತೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಮೃತರ ಹೆಸರನ್ನು ಕೈಬಿಡುವ ಬದಲು ಜೀವಂತ ಇದ್ದವರನ್ನು ಕೈಬಿಡಲಾಗಿದೆ. ಜೊತೆಗೆ ಸಂಬಂಧವೇ ಇಲ್ಲದ ಗ್ರಾಮಗಳಿಗೆ ಬದಲಾವಣೆ ಮಾಡುವ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಗೊಂದಲಗಳು ಇರುವುದರಿಂದ ಪ್ರಸ್ತುತ ನೀಡಿರುವ ಕಾಲಾವಕಾಶ ಸಾಕಾಗುವುದಿಲ್ಲ. ಯಾವುದೇ ಕಾರಣಕ್ಕೂ ಮತದಾರರ ಮತದಾನ ಹಕ್ಕನ್ನು ಕಸಿದುಕೊಳ್ಳುವ ಅಥವಾ ಮೊಟಕುಗೊಳಿಸುವ ಅವಕಾಶ ನೀಡದೆ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹೆಸರಿನ ಸೇರ್ಪಡೆ ಹಾಗೂ ಬದಲಾವಣೆಗೆ ಡಿ.8 ರ ವರೆಗೆ ಕಾಲಾವಕಾಶ ನೀಡಿರುವುದನ್ನು ಜಿಲ್ಲಾಡಳಿತ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ನಾಲ್ಕು ಬಾರಿ ನಾನು ಶಾಸಕನಾಗಿದ್ದಾಗಲೂ ಪೊಲೀಸ್ ಇಲಾಖೆ ಹಾಗೂ ಇತರ ಸರ್ಕಾರಿ ಇಲಾಖೆಯ ಕಚೇರಿ ಕಾರ್ಯದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ನಡೆಸಿಲ್ಲ. ಆದರೆ ಇದೀಗ ಅಧಿಕಾರಿಗಳ ಮೇಲೆ ಅನಗತ್ಯ ರಾಜಕೀಯ ಒತ್ತಡಗಳನ್ನು ತರಲಾಗುತ್ತಿದೆ. ದೂರು ದಾಖಲಿಸಿದವರ ಮೇಲೆಯೇ ಪ್ರಕರಣ ದಾಖಲಿಸಲು ಅಧಿಕಾರಿಗಳನ್ನು ಒತ್ತಾಯಿಸಲಾಗುತ್ತಿದೆ. ಅಧಿಕಾರಿಗಳು ಸ್ವತಂತ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಜಿಲ್ಲಾ ಎಸ್‌.ಪಿ ಅವಕಾಶ ಕಲ್ಪಿಸಬೇಕು. ಎಸ್‌ಸಿ/ಎಸ್‌ಟಿ ಸಮುದಾಯದವರ ಕುಂದುಕೊರತೆಗಳನ್ನು ಆಲಿಸಲು ಕಂದಾಯ ಹಾಗೂ ಪೊಲೀಸ್ ಇಲಾಖೆಯಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು. ಕಾನೂನು ಚೌಕಟ್ಟಿನ ಒಳಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬರೆಯುವವರ ವಿರುದ್ಧ ರಾಜಕೀಯ ಕಾರಣಗಳಿಗಾಗಿ ನೀಡುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮೀನುಗಾರರ ಪ್ರತಿ ಕಾರ್ಡ್‌ಗೆ ತಲಾ 300 ಲೀಟರ್ ಸೀಮೆಎಣ್ಣೆ ನೀಡಲು ಕ್ರಮ ಕೈಗೊಂಡಿತ್ತು. ಜೆಡಿಎಸ್-ಕಾಂಗ್ರೆಸ್ ಸಮ್ಮೀಶ್ರ ಸರ್ಕಾರದ ಅವಧಿಯಲ್ಲಿಯೂ ಈ ಸೌಲಭ್ಯವನ್ನು ವಿಸ್ತರಿಸಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಈ ಸೌಲಭ್ಯವನ್ನು ನೀಡದೆ ಇರುವುದರಿಂದ ನಾಡಾ ದೋಣಿ ಮೀನುಗಾರರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ಮೀನುಗಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದಲೂ ಪರಿಹಾರ ಹಣ ಬಿಡುಗಡೆಯಾಗುತ್ತಿಲ್ಲ. ಮೀನುಗಾರರ ಮಹಿಳೆಯರಿಗೆ ಸಾಲ ಮನ್ನವೂ ಆಗುತ್ತಿಲ್ಲ ಎನ್ನುವ ದೂರುಗಳಿವೆ ಎಂದು ಹೇಳಿದ ಗೋಪಾಲ ಪೂಜಾರಿಯವರು , ಡಿ.3 ರಂದು ಬೇಡಿಕೆ ಆಗ್ರಹಿಸಿ ಮೀನುಗಾರರು ನಡೆಸುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ತಾನು ಭಾಗಿಯಾಗುವುದಾಗಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶರತ್‌ಕುಮಾರ ಶೆಟ್ಟಿ ಬಾಳಿಕೆರೆ ಹಾಗೂ ಅರವಿಂದ ಪೂಜಾರಿ ಪಡುಕೋಣೆ ಇದ್ದರು.


Spread the love