ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಆಸ್ಕರ್‌ ಶ್ರಮ ಅಪಾರ – ಕೆ. ಗೋಪಾಲ ಪೂಜಾರಿ

Spread the love

ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಆಸ್ಕರ್‌ ಶ್ರಮ ಅಪಾರ – ಕೆ. ಗೋಪಾಲ ಪೂಜಾರಿ

ಕುಂದಾಪುರ: ಆಸ್ಕರ್ ಫೆರ್ನಾಂಡೀಸ್ ಅವರು ನನಗೆ ಶಾಸಕನಾಗಲು ಅವಕಾಶ ಮಾಡಿಕೊಟ್ಟಿದ್ದು, ನನ್ನೊಂದಿಗೆ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು. ಬೈಂದೂರು ಕ್ಷೇತ್ರವನ್ನು ಮಾದರಿಯನ್ನಾಗಿಸುವಲ್ಲಿ ಆಸ್ಕರ್ ಅವರ ಶ್ರಮವೂ ಅಪಾರವಾದುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.


ಅವರು ಸೋಮವಾರ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ದಿ| ಆಸ್ಕರ್ ಫೆರ್ನಾಂಡೀಸ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.


ಉಡುಪಿ ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಅವರು ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಪಕ್ಷ ಕಟ್ಟುವ ಹಾಗೂ ಸಾಕಷ್ಟು ಯುವ ನಾಯಕರನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಜಾತ ಶತ್ರುವಿನಂತೆ ಬದುಕಿದ್ದು, ಅವರೋರ್ವ ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವ ನಾಯಕನಾಗಿದ್ದರು ಎಂದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಈ ನಾಡು ಕಂಡ ಅಪರೂಪದ ರಾಜಕಾರಣಿಯಾದ ಆಸ್ಕರ್ ಅವರು ಬೈಂದೂರಿನಲ್ಲಿ ಹಿಂದೆ ಉಡ್ಡಯನ ಕೇಂದ್ರವಾಗುತ್ತಿರುವುದಕ್ಕೆ ಜನರ ವಿರೋಧಕ್ಕೆ ಮನ್ನಣೆ ನೀಡಿ, ಅದನ್ನು ಬೇರೆಡೆ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಆಸ್ಕರ್ ಅವರು ಪಕ್ಷಾತೀತ ವ್ಯಕ್ತಿ. ಶ್ರೇಷ್ಠ ಆಡಳಿಗಾರ, ಉತ್ತಮ ಸಹಕಾರಿ, ಎಲ್ಲರು ಮೆಚ್ಚಿಕೊಳ್ಳುವ ವ್ಯಕ್ತಿತ್ವ ಅವರದು ಎನ್ನುವುದಾಗಿ ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.


ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಪಕ್ಷದ ನಾಯಕರಾದ ಮಂಜುನಾಥ್ ಹೆಬ್ಬಾರ್, ಪಿ.ಎಲ್. ಜೋಸ್, ಅಶೋಕ್ ಶೆಟ್ಟಿ, ಎಸ್. ಕುಮಾರ್, ಲಿಂಗಪ್ಪ, ಲೋಕೇಶ್ ಖಾರ್ವಿ ಅವರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ವಾಸುದೇವ ಯಡಿಯಾಳ್, ರಘುರಾಮ್ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಸಂತೋಷ್ ಶೆಟ್ಟಿ ಹಕ್ಲಾಡಿ, ನಾಗರಾಜ ಗಾಣಿಗ, ಶೇಖರ್ ಪೂಜಾರಿ, ಮತ್ತಿತರರು ನುಡಿನಮನ ಸಲ್ಲಿಸಿದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ ಕುಮಾರ್ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.


Spread the love