
ಬೈಂದೂರು: ದಾಖಲೆ ಇಲ್ಲದ 20 ಲಕ್ಷ ರೂ ಹಣ ವಶಕ್ಕೆ, ಪ್ರಕರಣ ದಾಖಲು
ಕುಂದಾಪುರ: ಯಾವುದೇ ದಾಖಲೆಗಳಿಲ್ಲದೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 20 ಲಕ್ಷ ರೂ.ಗಳನ್ನು ಬೈಂದೂರು ಪೊಲೀಸರು ಶಿರೂರು ಚೆಕ್ ಪೋಸ್ಟಿನಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 16ರಂದು ಬೈಂದೂರು ಪೊಲೀಸ್ ಉಪನಿರೀಕ್ಷಕರಾದ ನಿರಂಜನ ಗೌಡ ಬಿ ಎಸ್ ಅವರು ಸಿಬ್ಬಂದಿಗಳೊಂದಿಗೆ ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರು ಗ್ರಾಮದ ಶಿರೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಭಟ್ಕಳ ಕಡೆಯಿಂದ ಬಂದ ಹುಂಡೈ ಕಂಪೆನಿಯ ವೆನ್ಯೂ ಮಾದರಿಯ ನೊಂದಣಿ ಸಂಖೈ ಇಲ್ಲದ ಕಾರನ್ನು ನಿಲ್ಲಿಸಿ ಪರಿಶೀಲಿಸಲಾಗಿ ಕಾರಿನ ಹಿಂಬದಿಯ ಸೀಟಿನ ಕೆಳಗೆ ಪ್ಲಾಸ್ಟಿಕ್ ಚೀಲದ ಕಟ್ಟು ಇದ್ದು ಅದರಲ್ಲಿ ಹಣ ಇರುವುದು ಕಂಡು ಬಂದಿದ್ದು ಕಾರಿನ ಚಾಲಕನಲ್ಲಿ ಹಣದ ಬಗ್ಗೆ ಯಾವುದೇ ದಾಖಲೆ ಇರುವ ಬಗ್ಗೆ ವಿಚಾರಿಸಿದ್ದು, ಯಾವುದೇ ದಾಖಲೆ ಇಲ್ಲದಿರುವುದು ತಿಳಿದು ಬಂದಿದೆ.
ನಂತರ ಕಟ್ಟನ್ನು ಬಿಡಿಸಿ ಪರಿಶೀಲಿಸಿದಾಗ 100 ರೂ ಮುಖಬೆಲೆಯ 3000 ನೋಟುಗಳು, 200 ರೂ ಮುಖಬೆಲೆಯ 1000 ನೋಟುಗಳು ಹಾಗೂ 500 ರೂ ಮುಖಬೆಲೆಯ 3000 ನೋಟುಗಳು ಇದ್ದು ಒಟ್ಟು 20 ಲಕ್ಷ ಹಣ ಪತ್ತೆಯಾಗಿದ್ದು, ಹಣದ ಬಗ್ಗೆ ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ ಮೇರೆಗೆ ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾರಿನ ಚಾಲಕ ಬೆಳ್ತಂಗಡಿ ತಾಲೂಕು ಶಿರ್ಲಾಲು ನಿವಾಸಿ ಬಶೀರ್ (42) ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.