ಬೈಂದೂರು-ರಾಣೆಬೆನ್ನೂರು ರಾ.ಹೆ. ಅಭಿವೃದ್ಧಿಗೆ 1012.75 ಕೋಟಿ ರೂ. ಅನುದಾನ ಮಂಜೂರು – ಬಿ ವೈ ರಾಘವೇಂದ್ರ

Spread the love

ಬೈಂದೂರು-ರಾಣೆಬೆನ್ನೂರು ರಾ.ಹೆ. ಅಭಿವೃದ್ಧಿಗೆ 1012.75 ಕೋಟಿ ರೂ. ಅನುದಾನ ಮಂಜೂರು – ಬಿ ವೈ ರಾಘವೇಂದ್ರ

ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766(ಸಿ) ಅಭಿವೃದ್ಧಿಗೆ 1012.75 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಂದೂರಿನಿಂದ ಕೊಲ್ಲೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಮಾಸೂರು, ರಟ್ಟೆಹಳ್ಳಿ, ಮೂಲಕ ರಾಣೆಬೆನ್ನೂರಿಗೆ ಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ಸಂಪೂರ್ಣವಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಕೇಂದ್ರ ಭೂಸಾರಿಗೆ ಸಚಿವರಿಗೆ ಮನವಿ ಮಾಡಿದ ಫಲವಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯ ಸಕಾರಾತ್ಮಕವಾಗಿ ಸ್ಪಂದಿಸಿ ಕಳೆದ ವರ್ಷ ಸದರಿ ಹೆದ್ದಾರಿಯ 7 ಕಿರು ಸೇತುವೆಗಳ ಹಾಗು ಹಾಗು 27.70 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣಕ್ಕೆ ಒಟ್ಟು 238.70 ಕೋಟಿ ರೂ. ಡಿ.ಪಿ.ಆರ್‌ಗೆ ಮಂಜೂರಾತಿ ನೀಡಿದ್ದು, ಈ ಕಾಮಗಾರಿಗಳು ಪ್ರಗತಿಯಲ್ಲಿ ಇದೆ.

2022-23 ನೇ ಸಾಲಿಗೆ ಬೈಂದೂರಿನಿಂದ ಹಾಲ್ಕಲ್ ಜಂಕ್ಷನ್‌-ಕೊಲ್ಲೂರು ಮೂಲಕ ನಾಗೋಡಿ ವರೆಗಿನ 40.40 ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು 394.05 ಕೋಟಿ ರೂ. ಮೊತ್ತದ ಡಿ.ಪಿ.ಆರ್‌ಗೆ ಕೇಂದ್ರ ಭೂಸಾರಿಗೆ ಮಂತ್ರಾಲಯ ಮಂಜೂರಾತಿ ನೀಡಿದೆ. ಈ ಹೆದ್ದಾರಿಯಲ್ಲಿ ಶಿಕಾರಿಪುರ ಪಟ್ಟಣಕ್ಕೆ 6.576 ಕಿ.ಮೀ ಉದ್ದದ ಬೈಪಾಸ್‌ ರಸ್ತೆ ನಿರ್ಮಾಣ ಮಾಡಲು 66.44 ಕೋಟಿ ರೂ. ಮೊತ್ತದ ಡಿ.ಪಿ.ಆರ್ ಹಾಗೂ ಹೊಸನಗರ-ಮಾವಿನಕೊಪ್ಪ ವೃತ್ತದಿಂದ, ಹೊಸನಗರ- ಬೈಪಾಸ್, ಶರಾವತಿ ಹಿನ್ನೀರಿಗೆ 1.54 ಕಿ.ಮೀ ಮತ್ತು 0.72 ಕಿ.ಮೀ ಉದ್ದದ 2 ಭಾರೀ ಸೇತುವೆಗಳ ನಿರ್ಮಾಣದೊಂದಿಗೆ ಆಡುಗೋಡಿವರೆಗೆ 13.82 ಕಿ.ಮೀ ಉದ್ದದ ಬದಲಿ ರಸ್ತೆ ನಿರ್ಮಾಣ ಮಾಡಲು 313.56 ಕೋಟಿ ರೂ. ಡಿ.ಪಿ.ಆರ್‌ಗೆ ಮಂಜೂರಾತಿ ನೀಡಲು ಹಾಗೂ ಬಾಕಿ ಉಳಿದ ಹೆದ್ದಾರಿ ಅಗಲೀಕರಣ ಮಾಡಲು ಡಿ.ಪಿ.ಆರ್ ತಯಾರಿಸಲು ಸಹ ಕೇಂದ್ರ ಭೂಸಾರಿಗೆ ಮಂತ್ರಾಲಯವು ಆದೇಶಿಸಿದೆ.

ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು 1012.75 ಕೋಟಿ ರೂ.ಗಳನ್ನು ಮಂಜೂರು ಮಾಡಿದ ಕೇಂದ್ರ ಭೂಸಾರಿಗೆ ಸಚಿವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ, ಶಿವಮೊಗ್ಗ ನಗರದ ಉತ್ತರ ಭಾಗದ ಬಾಕಿ ಉಳಿದ 15 ಕಿ.ಮೀ ಉದ್ದದ ಬೈಪಾಸ್‌ ರಸ್ತೆಯ ಮಂಜೂರಾತಿಗೆ ಹಾಗೂ ಶಿವಮೊಗ್ಗ ನಗರಕ್ಕೆ 34 ಕಿ.ಮೀ ಉದ್ದದ ರಿಂಗ್ ರಸ್ತೆ ಪೂರ್ಣಗೊಳಿಸಲು ನೆರವು ನೀಡಲು ಕೋರಲಾಗಿದ್ದು ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯರಿಗೆ ಈ ಪ್ರಾಸ್ತಾವನೆಗೆ ಮಂಜೂರಾತಿ ದೊರಕಿಸಿಕೊಡಲು ಕ್ರಮವಹಿಸಲು ಸೂಚಿಸಿರುತ್ತಾರೆ.

ಶಿವಮೂಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಒಪ್ಪಿಗೆ :
ಶಿವಮೊಗ್ಗ ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿಗಳಾದ, ಶಿವಮೊಗ್ಗ- -ಹೊನ್ನಾಳಿ- ಮಲೆಬೆನ್ನೂರು-ಹರಿಹರ- ಹರಪನಹಳ್ಳಿ-ಮರಿಯಮ್ಮನಹಳ್ಳಿ ರಸ್ತೆ. ಶಿವಮೊಗ್ಗ-ಶಿಕಾರಿಪುರ-ಶಿರಾಳಕೊಪ್ಪ-ಹಾನಗಲ್-ತಡಸ ರಸ್ತೆ. ಆಯನೂರು-ರಿಪ್ಪನ್‌ಪೇಟೆ-ಹುಂಚ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ ರಸ್ತೆ ಹಾಗೂ ಸಾಗರ -ಸೊರಬ- ಶಿರಾಳಕೊಪ್ಪ-ಆನವಟ್ಟಿ ರಸ್ತೆಗಳನ್ನು ಸಹ ಮೇಲ್ದರ್ಜೆಗೇರಿಸಿ 4 ಪಥದ ರಸ್ತೆಗಳನ್ನಾಗಿ ಅಗಲೀಕರಣಗೊಳಿಸಲು ಕೋರಲಾಗಿದ್ದು ಸಚಿವರು ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕ್ಷೇತ್ರದ ಜನರ ಬೇಡಿಕೆಗಳಿಗೆ ಸ್ಪಂದಿಸಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಜೈರಾಂ ಗಡ್ಕರಿಯವರಿಗೆ ಈ ಭಾಗದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿರುವುದಾಗಿ ಸಂಸದರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love