
ಬೈಕ್ ವೀಲಿಂಗ್: ಕೇಸ್ ದಾಖಲಿಸಿದ ಪೊಲೀಸರು
ಚಿಕ್ಕಬಳ್ಳಾಪುರ : ನಗರದ ಸುತ್ತಮುತ್ತಲಿನ ಪ್ರವಾಸಿ ತಾಣ, ಕಾಲೇಜ್ ಕ್ಯಾಂಪಸ್ ಗಳ ಬಳಿ ವೀಲಿಂಗ್ ಮಾಡಿಕೊಂಡು ಡಿಫ್ರೆಂಟಾಗಿ ಸೈಲೆನ್ಸರ್ ಗಳನ್ನು ಅಳವಡಿಸಿಕೊಂಡು ಶಬ್ದ ಮಾಡಿಕೊಂಡು ಬೈಕ್ ಓಡಿಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ವಿಪರೀತ ಶಬ್ದ ಮಾಡಿಕೊಂಡು ರಸ್ತೆಗಳಲ್ಲಿ ಬೈಕ್ ಚಲಾಯಿಸುವುದು, ಪುಂಡಪೋಕರಿಗಳ ಹಾವಳಿಯಿಂದಾಗಿ ನಾಗರಿಕರು ಬೆಚ್ಚಿ ಬೀಳುವಂಥಾಗಿದೆ. ಅಂತಹ ಬೈಕುಗಳನ್ನು ಹಿಡಿದು ಪೊಲೀಸರು ಅದರಲ್ಲಿನ ಸೈಲೆನ್ಸರ್ ಗಳನ್ನು ತೆಗೆದು ರಸ್ತೆಯಲ್ಲಿ ಸಾಲಾಗಿ ಜೋಡಿಸಿ ಅವುಗಳ ಮೇಲೆ ಜೆಸಿಪಿ ಹತ್ತಿಸಿ ಪುಡಿ ಪುಡಿ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಈ ಮೂಲಕ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸೈಲೆನ್ಸರ್ ಗಳ ಮೇಲೆ ಜೆಸಿಬಿ ಹತ್ತಿಸುವ ಕಾರ್ಯ ನಡೆಸಿದರು. ಈ ನಡುವೆ ಅಪರಾಧ ತಡೆ ಮಾಸಾಚರಣೆ ವೇಳೆ ಅಪರಾಧ ಚಟುವಟಿಕೆಗಳಲ್ಲಿ ಒಂದಾದ ಬೈಕ್ ವೀಲಿಂಗ್ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಕೇಸು ದಾಖಲಿಸಲಾಗಿದೆ. ಡಿಫ್ರೆಂಟ್ ಸೈಲೆನ್ಸರ್ ಗಳನ್ನು ಕಿತ್ತು ಅವುಗಳ ಮೇಲೆ ಜೆಸಿಪಿ ಹತ್ತಿಸಿ ಪುಡಿಪುಡಿ ಮಾಡಲಾಗಿದ್ದು ಮತ್ತೆ ಈ ರೀತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಎಚ್ಚರಿಕೆ ಗಂಟೆ ಆಗಿದೆ.
ಇದೇ ವೇಳೆ 108 ಆಂಬುಲೆನ್ಸ್ ಚಾಲಕರೊಬ್ಬರು ಮಾತನಾಡಿ ಆಂಬುಲೆನ್ಸ್ ಓಡಿಸುವಾಗಲೇ ವೀಲಿಂಗ್ ಮಾಡಿಕೊಂಡು ಅಡ್ಡ ಬಂದು ಬಿದ್ದು ಅದೇ ಆಂಬುಲೆನ್ಸ್ ನಲ್ಲಿ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿರುವ ಅನುಭವ ನನಗಾಗಿದೆ. ಅಂತಹವರನ್ನು ಹಿಡಿದು ಕೇಸು ಹಾಕಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ರಾಜು, ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್, ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಇದ್ದರು.