ಬೈಬಲ್‌, ಕುರಾನ್‌ಗಳು ಧಾರ್ಮಿಕ ಪುಸ್ತಕಗಳು, ಭಗವದ್ಗೀತೆ ಧಾರ್ಮಿಕ ಮೌಲ್ಯಗಳನ್ನು ತಿಳಿಸುವ ಪುಸ್ತಕ – ಸಚಿವ ಬಿ ಸಿ ನಾಗೇಶ್

Spread the love

ಬೈಬಲ್‌, ಕುರಾನ್‌ಗಳು ಧಾರ್ಮಿಕ ಪುಸ್ತಕಗಳು, ಭಗವದ್ಗೀತೆ ಧಾರ್ಮಿಕ ಮೌಲ್ಯಗಳನ್ನು ತಿಳಿಸುವ ಪುಸ್ತಕ – ಸಚಿವ ಬಿ ಸಿ ನಾಗೇಶ್

ಮಂಗಳೂರು: ಬೈಬಲ್‌ ಮತ್ತು ಕುರಾನ್‌ಗಳು ಧಾರ್ಮಿಕ ಪುಸ್ತಕಗಳು. ಭಗವದ್ಗೀತೆ ಧಾರ್ಮಿಕ ಪುಸ್ತಕ ಅಲ್ಲ. ಅದು ಜೀವನಕ್ಕೆ ಬೇಕಾದ ಮೌಲ್ಯಗಳನ್ನು ತಿಳಿಸುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಕರ್ನಾಟಕ ಶಿಕ್ಷಣ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಶಾಲೆಗಳು ಕಾಯ್ದೆಯಲ್ಲಿರುವ ನಿಯಮ ಅನುಸರಿಸಬೇಕು. ಈ ಕಾಯ್ದೆ ಅನ್ವಯ ಯಾವುದೇ ಧಾರ್ಮಿಕ ಪುಸ್ತಕ ಅಥವಾ ಧಾರ್ಮಿಕ ಆಚರಣೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ತರಲು ಅವಕಾಶವಿಲ್ಲ. ಬೈಬಲ್‌ ಮತ್ತು ಕುರಾನ್‌ಗಳು ಧಾರ್ಮಿಕ ಪುಸ್ತಕಗಳು. ಭಗವದ್ಗೀತೆ ಧಾರ್ಮಿಕ ಪುಸ್ತಕ ಅಲ್ಲ. ಅದು ಜೀವನಕ್ಕೆ ಬೇಕಾದ ಮೌಲ್ಯಗಳನ್ನು ತಿಳಿಸುತ್ತದೆ’ ಎಂದು ಹೇಳಿದರು

‘ಬೆಂಗಳೂರಿನ ಶಾಲೆಯೊಂದರಲ್ಲಿ ಬೈಬಲ್‌ ಓದು ಕಡ್ಡಾಯಗೊಳಿಸಿರುವ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಬಿಇಒಗೆ ಇದನ್ನು ಪರಿಶೀಲಿಸಲು ಸೂಚಿಸಲಾಗಿದೆಯೇ ವಿನಾ ಶಾಲೆಯ ಆಡಳಿತಾತ್ಮಕ ವಿಷಯದಲ್ಲಿ ಶಿಕ್ಷಣ ಇಲಾಖೆ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.

‘ಮೂರನೇ ಅಲೆ ಇರುವಾಗಲೇ ಶಾಲೆಗಳನ್ನು ನಡೆಸಿದ್ದೇವೆ. ಕೋವಿಡ್‌ನಿಂದಾಗಿ ಒಂದೂವರೆ ವರ್ಷದಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಿರುವ ಕಾರಣ, 15 ದಿನ ಮುಂಚಿತವಾಗಿ ಶಾಲೆ ಪ್ರಾರಂಭಿಸಿ, ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ತಜ್ಞರ ಪ್ರಕಾರ ಜುಲೈ ವೇಳೆಗೆ ನಾಲ್ಕನೇ ಅಲೆ ಬರುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಪರಿಸ್ಥಿತಿ ಅವಲೋಕಿಸಿ, ಶಿಕ್ಷಣ ಇಲಾಖೆ ನಿರ್ಣಯ ಕೈಗೊಳ್ಳುತ್ತದೆ’ ಎಂದರು.

ಕರ್ನಾಟಕ ಪಠ್ಯಕ್ರಮದ ನಲಿಕಲಿ ಮತ್ತು ಚಿಲಿಪಿಲಿ ಕಾರ್ಯಕ್ರಮಗಳು ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಆಶಯಕ್ಕೆ ತಕ್ಕಂತೆ ಇವೆ. ಹೀಗಾಗಿ, 1 ಮತ್ತು 2ನೇ ತರಗತಿಗೆ ಈ ವರ್ಷದಿಂದ ರಾಜ್ಯದ 20 ಸಾವಿರ ಶಾಲೆಗಳಲ್ಲಿ ಎನ್‌ಇಪಿ ಜಾರಿಗೊಳಿಸಲಾಗುವುದು. ಸಂಖ್ಯಾಭ್ಯಾಸ ಮತ್ತು ಅಕ್ಷರಾಭ್ಯಾಸಕ್ಕೆ ಎನ್‌ಇಪಿಯಲ್ಲಿ ಒತ್ತು ನೀಡಲಾಗಿದೆ. ಇದು ಒತ್ತಡವಿಲ್ಲದೆ, ಮಕ್ಕಳು ಸಹಜವಾಗಿ ಕಲಿಯುವ ಪ್ರಕ್ರಿಯೆಯಾಗಿದೆ ಎಂದು ಪ್ರತಿಕ್ರಿಯಿಸಿದರು.


Spread the love