ಬೋಟ್ ದುರಂತದ ಕುಟುಂಬದ ಪರ ಮಾತನಾಡದೆ ಮೌನ ವಹಿಸಿದ ಕರಾವಳಿ ಸಂಸದರು: ರಮೇಶ್ ಕಾಂಚನ್

Spread the love

ಬೋಟ್ ದುರಂತದ ಕುಟುಂಬದ ಪರ ಮಾತನಾಡದೆ ಮೌನ ವಹಿಸಿದ ಕರಾವಳಿ ಸಂಸದರು: ರಮೇಶ್ ಕಾಂಚನ್

ಉಡುಪಿ: ಸುವರ್ಣ ತ್ರಿಭುಜ ಬೋಟ್ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಹೋಗಿ ಮೃತರಾದ 7 ಮೀನುಗಾರರು ಕುಟುಂಬಕ್ಕೆ ಕೇಂದ್ರ ಸರಕಾರದಿಂದ ನಯಾ ಪೈಸೆ ಬಿಡುಗಡೆ ಬಗ್ಗೆ ಚಕಾರವೆತ್ತದ ಕರಾವಳಿಯ ಸಂಸದರ ನಡೆಯ ಬಗ್ಗೆ ಕಾಂಗ್ರೆಸ್ ಮುಖಂಡ, ಉಡುಪಿ ನಗರ ಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಅಸಮಾಧನ ವ್ಯಕ್ತಪಡಿಸಿದ್ದಾರೆ.

ಈ ಬೋಟ್ ದುರಂತ ನಡೆದು ಎರಡು ವರ್ಷವಾದರೂ, ಇನ್ನೂ ಈ ಘಟನೆಯ ತನಿಖೆ ಬಗ್ಗೆಯಾಗಲೀ, ಮೀನುಗಾರರಿಗೆ ಮತ್ತು ಅವರ ಕುಟುಂಬಕ್ಕೆ ಯಾವುದೇ ಸ್ಪಷ್ಟ ಚಿತ್ರಣವನ್ನು ಕೇಂದ್ರ ಸರಕಾರ ನೀಡಿಲ್ಲ.

ಈ ದುರ್ಘಟನೆಗೆ ನೌಕಾಪಡೆಯ ಬೃಹತ್ ನೌಕೆಯೇ ಕಾರಣವೆಂದು ಮೀನುಗಾರರು ಆರೋಪ ಮಾಡುತ್ತಿದ್ದು, ಇದರ ಬಗ್ಗೆಯೂ ಕರಾವಳಿಯ ಸಂಸದರಾದ ನಳಿನ್ ಕುಮಾರ್ ಕಟೀಲ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಕೂಡ ಚಕಾರವೆತ್ತುತ್ತಿಲ್ಲ. ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರಕ್ಕೂ ಪ್ರಯತ್ನಿಸದಿರುವುದು ಖಂಡನೀಯವೆಂದು ರಮೇಶ್ ಕಾಂಚನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನೌಕಾಪಡೆಯನ್ನು ರಕ್ಷಿಸಲು ಸತ್ಯಾಂಶ ಮರೆಮಾಚಲಾಗಿತ್ತು, ಅಧಿಕಾರಿಗಳು ನಿಜ ಹೇಳಲು ಮುಂದೆ ಬಂದು ಕೊನೆ ಕ್ಷಣದಲ್ಲಿ ಒಪ್ಪಿಕೊಂಡಿಲ್ಲದಿರಲು ಏನು ಕಾರಣವೆಂದು ಬಹಿರಂಗ ಪಡಿಸಲಿ. ಬೋಟ್ ಅವಘಡದಲ್ಲಿ ಕೇಂದ್ರ ಸರಕಾರ ಯಾವುದೇ ಪರಿಹಾರ ನೀಡದೆ ಮೀನುಗಾರ ಕುಟುಂಬಕ್ಕೆ ಅನ್ಯಾಯ ಎಸಗಿದೆಂದು ಕಾಂಚನ್ ದೂರಿದ್ದಾರೆ.


Spread the love