ಬೋರಿವಲಿಯಲ್ಲಿ ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ ವತಿಯಿಂದ ಅದ್ದೂರಿಯ “ಮಂಥನ್ 2023”

Spread the love

ಬೋರಿವಲಿಯಲ್ಲಿ ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ ವತಿಯಿಂದ ಅದ್ದೂರಿಯ “ಮಂಥನ್ 2023”

ಮುಂಬಯಿ: ಕಳೆದ ಹಲವಾರು ವರ್ಷಗಳಿಂದ ಬೋರಿವಲಿ ಪಶ್ಚಿಮದಲ್ಲಿ ಡಾನ್ಸ್ ತರಗತಿಯನ್ನು ನಡೆಸುತ್ತಾ ಸಾವಿರಾರು ಆಶಕ್ತರಿಗೆ “ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ” ಮೂಲಕ ನೃತ್ಯ ಕಲಿಸುತ್ತಿರುವ, ಕಿರುತೆರೆಯಲ್ಲಿ ನೃತ್ಯ ಹಾಗೂ ಎ.ಬಿ.ಸಿ.ಡಿ. ಯಂತಹ ಚಲನಚಿತ್ರದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ ರೋಹಿತ್ ಪೂಜಾರಿ ಯವರ ನೇತೃತ್ವದಲ್ಲಿ ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ ಯ 6 ನೇ ವಾರ್ಷಿಕ ಸಮಾರಂಭ ಮಂಥನ್ 2023 ಮೇ. 28 ರಂದು ಬೋರಿವಲಿ ಪಶ್ಚಿಮದ ಪ್ರಭೊಧನ್ಕರ್ ಠಾಕ್ರೆ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.

ರೋಹಿತ್ ಪೂಜಾರಿ ಹಾಗೂ ಅವರ ವಿದ್ಯಾರ್ಥಿಗಳು ಕೋವಿಡ್ ಮಹಾಮಾರಿ ಅಧಾರಿತ ನೂತನ ಶೈಲಿಯ ನೃತ್ಯ ಪ್ರದರ್ಶನ ನೀಡಿ ಸೇರಿದ ನೃತ್ಯಾಭಿಮಾನಿಗಳ ಗಮನ ಸೆಳೆದರು.

ಟಿ. ವಿ. ಪೂಜಾರಿಯವರ ಉಪಸ್ಥಿತಿಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಸುರೇಂದ್ರ ಪೂಜಾರಿ, ಅತಿಥಿಗಳಾಗಿ ಸಮಾಜ ಸೇವಕಿ, ತುಳು ಸಂಘ ಬೋರಿವಲಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ ಮತ್ತು ಸಮಾಜ ಸೇವಕಿ ಶೀತಲ್ ಮ್ಹಾತ್ರೆ ಉಪಸ್ಥಿತರಿದ್ದು ಮಾತನಾಡುತ್ತಾ ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ ಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಸುನಿಲ್ ರಾಣೆ ಯವರು ಮಾತನಾಡಿ ರೋಹಿತ್ ಪೂಜಾರಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ ಡ್ಯಾನ್ಸ್ ಅಕಾಡಮಿ ಗೆ ಶುಭ ಹಾರೈಸುತ್ತಾ ಮಂಥನ್ 2023 ನಲ್ಲಿ ಬಾಗವಹಿಸಿದ ಎಲ್ಲಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.

ನೃತ್ಯದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ರೋಹಿತ್ ಪೂಜಾರಿಯವರು ಧನ್ಯವಾದ ಸಮರ್ಪಿಸಿದರು.


Spread the love