ಬ್ಯಾಂಕಿಂಗ್ ಕ್ಷೇತ್ರ ಬಯಸುವವರಿಗೆ ಐಟಿ– ಡಿಜಿಟಲ್ ಜ್ಞಾನ ಅಗತ್ಯ

Spread the love

ಬ್ಯಾಂಕಿಂಗ್ ಕ್ಷೇತ್ರ ಬಯಸುವವರಿಗೆ ಐಟಿ– ಡಿಜಿಟಲ್ ಜ್ಞಾನ ಅಗತ್ಯ

ಮೈಸೂರು:ದೇಶದಲ್ಲಿ ಬ್ಯಾಂಕಿಂಗ್ ಸಾಕ್ಷರತೆ ಹೆಚ್ಚಾಗುತ್ತಿದೆ. ಡಿಜಿಟಲ್ ಕ್ರಾಂತಿ ಉಂಟಾಗುತ್ತಿರುವ ಹಿನ್ನೆಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರಲು ಆಪೇಕ್ಷೀಸುವ ಅಭ್ಯರ್ಥಿಗಳು ಐಟಿ ಮತ್ತು ಡಿಜಿಟಲ್ ಜ್ಞಾನವನ್ನು ಕರಗತ ಮಾಡಿಕೊಂಡಿರಬೇಕು ಎಂದು ಕರ್ಣಾಟಕ ಬ್ಯಾಂಕ್ ಎಂ.ಡಿ ಮತ್ತು ಸಿಇಒ ಎಂ.ಎಸ್.ಮಹಾಬಲೇಶ್ವರ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 50 ದಿನಗಳು ನಡೆದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ಆನ್‌ಲೈನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ವ್ಯವಸ್ಥೆ ಒಂದು ದೇಶದ ನರ ಮಂಡಲ ಇದ್ದಂತೆ. ಬ್ಯಾಂಕಿಂಗ್ ಸಾಕ್ಷರತೆ ಹೆಚ್ಚುತ್ತಿದೆ. ಜನ್‌ಧನ್, ಆಧಾರ್ ಮತ್ತು ಮೊಬೈಲ್ ಪರಿಣಾಮವಾಗಿ ಜನಜನಗಳಿಗೆ – ಮನೆಗಳಿಗೆ ಬ್ಯಾಂಕ್ ವ್ಯವಸ್ಥೆ ತಲುಪಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಗೆ ಕಾರಣ ಆಗಿರುವುದು ಡಿಜಿಟಲ್ ಕ್ರಾಂತಿ. ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ಎನ್ನುವುದು ಜಾಸ್ತಿಯಾಗುತ್ತಿದೆ. ಬ್ಯಾಂಕ್‌ಗಳು ಕಡಿಮೆಯಾಗಲಿದೆ. ಹೀಗಾಗಿ ಮುಂದೆ ಈ ಕ್ಷೇತ್ರಕ್ಕೆ ಬರುವವರು ಐಟಿ ಮತ್ತು ಡಿಜಿಟಲ್ ಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಸಾಮಾನ್ಯ ನೌಕರರಾಗಿ ಸೇರ್ಪಡೆಗೊಳ್ಳುವವರು ಪ್ರಾಮಾಣಿಕತೆ, ಪರಿಶ್ರಮದಿಂದ ಕರ್ತವ್ಯ ನಿರ್ವಹಿಸಿದರೆ, ಉನ್ನತ ಹುದ್ದೆ ಅಲಂಕರಿಸಬಹುದು. ಜ್ಞಾನದ ಹಸಿವು ಇರಬೇಕು. ಬಡ್ತಿಯ ಹಿಂದೆ ಹೋಗಬಾರದು, ಜ್ಞಾನದ ಹಿಂದೆ ಹೋಗಬೇಕು ಎಂದರು.

ಉದ್ಯೋಗ ಸೃಷ್ಟಿಸುವಲ್ಲಿ ಭಾರತೀಯ ಸೇನೆ, ಪ್ಯಾರಾ ಮಿಲಿಟರಿ ಮೊದಲನೇ ಸ್ಥಾನದಲ್ಲಿದೆ. 26ಲಕ್ಷ ಉದ್ಯೋಗ ಸೃಷ್ಟಿಸಿರುವ ಹೆಮ್ಮೆ ಭಾರತೀಯ ಸೇನೆಯದ್ದು, ಎರಡನೇ ಸ್ಥಾನದಲ್ಲಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ೧೪ ಲಕ್ಷ ಉದ್ಯೋಗಿಗಳಿದ್ದಾರೆ. ಪ್ರತಿ ವರ್ಷ 50 ಸಾವಿರದಿಂದ ಒಂದು ಲಕ್ಷದವರೆಗೆ ಹೊಸ ಉದ್ಯೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತೀಯ ರೈಲ್ವೆ ಇದೆ. ರೈಲ್ವೇ 12 ಲಕ್ಷ ಉದ್ಯೋಗಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.

ಎಡಿಜಿಪಿ (ರೈಲ್ವೇಸ್) ಭಾಸ್ಕರ್‌ರಾವ್ ಮಾತನಾಡಿ, ನಾವು ಸಿದ್ಧತೆ ನಡೆಸುವ ಕಾಲಕ್ಕೆ ಸರಿಯಾದ ಸಂಪನ್ಮೂಲ ಲಭ್ಯವಿರಲಿಲ್ಲ. ಈಗ ಆನ್‌ಲೈನ್‌ನಿಂದ ಸಾಕಷ್ಟು ವ್ಯಾಸಂಗಕ್ಕೆ ಸಂಬಂಧಿಸಿದ ಸಂಪನ್ಮೂಲಗಳು ಲಭ್ಯವಿದೆ. ಸ್ವಯಂ ಅಧ್ಯಯನ ಮಾಡುತ್ತೇವೆ ಎನ್ನುವವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಹೀಗಾಗಿ ಆನ್‌ಲೈನ್ ಜೊತೆಗೆ ಆಪ್‌ಲೈನ್ ಕೋಚಿಂಗ್ ಮತ್ತು ತರಬೇತಿ ಅಗತ್ಯ. ಆದರೆ ಪೈಪೋಟಿಯೂ ಹಾಗೇ ಇರುತ್ತದೆ. ಹಾಗಾಗಿ ಹೆಚ್ಚು ಅಧ್ಯಯನ ಮಾಡಬೇಕು. ಉದ್ಯೋಗ ಪಡೆಯಬೇಕೆಂಬ ಆಸೆ ಮತ್ತು ಆಸಕ್ತಿ ಇದ್ದರೆ ಸಾಲದು. ಅಗತ್ಯ ಸಿದ್ಧತೆಯೂ ಅಗತ್ಯ. ಆಳ ಅಧ್ಯಯನ ಜೊತೆಗೆ ಫೋಕಸ್ ಆಗಿ ಓದಬೇಕು. ವಿದ್ಯಾರ್ಥಿಗಳು ಪಠ್ಯಕ್ರಮ ಹೊರತಾಗಿಯೂ ಅಧ್ಯಯನ ಮಾಡಿಕೊಂಡಿರಬೇಕು. ಎಂದು ತರಬೇತಿ ಪಡೆದಿರುವವರಿಗೆ ಕಿವಿ ಮಾತು ಹೇಳಿದರು.

ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ವಿಧುಷಿ ಶ್ರೀರಂಜಿನಿ ವಿವೇಕ್ ಇದ್ದರು.


Spread the love