ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ, ಪುರಸ್ಕಾರ ಪ್ರಕಟ

Spread the love

ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ, ಪುರಸ್ಕಾರ ಪ್ರಕಟ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಗೌರವ ಪುರಸ್ಕಾರ’ ಪ್ರಕಟವಾಗಿದ್ದು, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿದಂತೆ ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ, ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ, ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರಿಗೆ ‘ಗೌರವ ಪ್ರಶಸ್ತಿ’ ಹಾಗೂ ಆರು ಮಂದಿ ‘ಗೌರವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.

ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ, ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹುಸೈನ್ ಕಾಟಿಪಳ್ಳ ಮತ್ತು ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆಗಾಗಿ ಡಾ.ಇ.ಕೆ.ಎ.ಸಿದ್ದೀಕ್ ಆಡ್ಡೂರು ಅವರನ್ನು ‘ಬ್ಯಾರಿ ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ಗೌರವ ಪುರಸ್ಕಾರಕ್ಕೆ ಅಶ್ರಫ್ ಅಪೋಲೋ (ಬ್ಯಾರಿ ಸಂಗೀತ ಕ್ಷೇತ್ರ), ಡಾ.ಕೆ.ಎ.ಮುನೀರ್ ಬಾವ(ಬ್ಯಾರಿ ಸಂಘಟನೆ ಕ್ಷೇತ್ರ), ಮರಿಯಮ್ ಫೌಝಿಯ ಬಿ.ಎಸ್. (ಬ್ಯಾರಿ ಮಹಿಳಾ ಸಾಧಕಿ), ಬ್ಯಾರಿ ಝುಲ್ಫಿ(ಬ್ಯಾರಿ ಯುವ ಪ್ರತಿಭೆ), ಮುಹಮ್ಮದ್ ಬಶೀರ್ ಉಸ್ತಾದ್(ಬ್ಯಾರಿ ದಫ್ ಕ್ಷೇತ್ರ) ಹಾಗೂ ಮುಹಮ್ಮದ್ ಫರಾಝ್ ಅಲಿ(ಬ್ಯಾರಿ ಬಾಲ ಪ್ರತಿಭೆ) ಆಯ್ಕೆಯಾಗಿದ್ದಾರೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗೌರವ ಪ್ರಶಸ್ತಿಯು ರೂ.50,000 ನಗದು, ಶಾಲು, ಹಾರ, ಫಲ ತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪುರಸ್ಕಾರವು ರೂ.10,000 ನಗದು ಶಾಲು, ಹಾರ, ಸ್ಮರಣಿಕೆ ಮತ್ತು ಪುರಸ್ಕಾರ ಪತ್ರಗಳನ್ನು ಒಳಗೊಂಡಿರುತ್ತದೆ.

ಕೋರೋನದ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾದ ಬಳಿಕ, ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪರಿಚಯ

ಹರೇಕಳ ಹಾಜಬ್ಬ (ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ) :

ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬ ಪದ್ಮಶ್ರೀ ಪುರಸ್ಕೃತರು. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲ್ ನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು. 64 ವರ್ಷದ ಹಾಜಬ್ಬ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಆದರೂ ಈಗ ತಮ್ಮೂರಿಗೆ ಶಾಲೆ ಕಟ್ಟಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಹಸನಾಗಿಸಿದ್ದಾರೆ. ಇದೇ ಕಾರಣಕ್ಕೆ ಅಕ್ಷರ ಸಂತ ಎನಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2020ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಿದೆ.

ಹುಸೈನ್ ಕಾಟಿಪಳ್ಳ (ಬ್ಯಾರಿ ಕಲೆ ಮತ್ತು ಸಾಹಿತ್ಯ) :

ಇವರು ಮಂಗಳೂರಿನ ಪಾಂಡೇಶ್ವರ ನಿವಾಸಿ. ಕಳೆದ ಮೂರು ದಶಕಗಳಿಂದ ಹೆಚ್ಚು ಕಾಲ ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಮತ್ತು ಅನೇಕ ಸ್ಮರಣ ಸಂಚಿಕೆಗಳಲ್ಲಿ ಕತೆ, ಕವನ, ಲೇಖನಗಳು ಪ್ರಕಟವಾಗಿವೆ. ನಿಲಾವು ಎಂಬ ಬ್ಯಾರಿ ಮಾಸಪತ್ರಿಕೆಯ ಸಂಪಾದಕರಾಗಿಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಹುಸೈನ್ ಕಾಟಿಪಳ್ಳರ ಗೀತೆಗಳು ಎಂಬ ಬ್ಯಾರಿ ಹಾಡುಗಳ ಪುಸ್ತಕ, ಬಿರ್ಂದ ಹಾಗೂ ಮೈಲಾಂಜಿ ಎಂಬ ಎರಡು ಬ್ಯಾರಿ ಕವನ‌ ಸಂಕಲನಗಳು, ‘ಅಧ್ಯಕ್ಷರ ರಾಜಿನಾಮೆ’ ಎಂಬ‌ಕನ್ನಡ ಕಥಾಸಂಕಲನ, ‘ಸಂತ್ರಪ್ತಿಯ ಜೀವನ ಪಯಣ’ ಎಂಬ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ರ ಆತ್ಮಕಥನದ ನಿರೂಪಣೆ ಪ್ರಕಟವಾಗಿವೆ. ‘ಸುವರ್ಣ ಮಹೋತ್ಸವ ಸಂಭ್ರಮ’, ‘ಸ್ವರ್ಣ ಮಂಜರಿ’, ‘ಸ್ಪಂದನ’, ‘ಸಂಪದ’, ‘ಪಯಣ ಭಾಗ-1’ ಮತ್ತು ‘ಪಯಣ ಭಾಗ-2’ ಮುಂತಾದ ಸ್ಮರಣ ಸಂಚಿಕೆಗಳ ಸಂಪಾದಕನಾಗಿ ಸಂಚಿಕೆಗಳನ್ನು ಹೊರತಂದಿದ್ದಾರೆ. ದೋಸ್ತಿಲು ತುಳು ಚಲನಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ‌ ಮಾಡಿದ್ದಾರೆ. ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ ದ್ವಿತೀಯ ಬಿ.ಎ. / ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿದ ನುಡಿಮಾಲೆಯಲ್ಲಿ ಇವರ ಬ್ಯಾರಿ ಕವನ ಪ್ರಕಟವಾಗಿದೆ. ತುಳು ಹಾಗೂ ಬ್ಯಾರಿ ಭಾಷೆಗಳಲ್ಲಿ ‘ಮಹಾಸಭೆ’ ಎಂಬ ನಾಟಕ ರಚಿಸಿ ನಿರ್ದೇಶಿಸಿ, ಅಭಿನಯಿಸಿದ್ದಾರೆ. 6 ಕನ್ನಡ, 4 ತುಳು, 60ಕ್ಕೂ ಹೆಚ್ಚು ಬ್ಯಾರಿ ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚನೆ. 15 ಬ್ಯಾರಿ, 1 ತುಳು, ಹಾಡುಗಳ ವಿಡಿಯೋ ಆಲ್ಬಂಗಳಿಗೆ ಸಾಹಿತ್ಯ ರಚನೆ. ‘ಮುನ್ನುಡಿ’ ಎಂಬ ಕನ್ನಡ, ಹಾಗೂ ‘ಅಬ್ಬಾ’ ಎಂಬ ಬ್ಯಾರಿ ಚಲನಚಿತ್ರಗಳಲ್ಲಿ ಅತಿಥಿ ಕಲಾವಿದನಾಗಿ ನಟಿಸಿದ್ದಾರೆ. ಸಾವುಞ್ಞಾಕರೊ ಸಾಲೆ, ಅಂಗಲಾಪು, ಮಹಾಸಭೆ ಮುಂತಾದ ನಾಟಕಗಳಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಡಾ.ಇ.‌ಕೆ.ಎ. ಸಿದ್ದೀಕ್ ಅಡ್ಡೂರ್ ( ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ):

ಇವರು ಕಳೆದ 20 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ನಗರದ ಹೊರವಲಯದ ಅಡ್ಡೂರು ಎಂಬಲ್ಲಿ ಇವರು ಸ್ವಂತ ಕ್ಲಿನಿಕನ್ನು ಹೊಂದಿದ್ದು ಕೊರೋನದಂತಹ ಸಂಕಷ್ಟದ ದಿನಗಳಲ್ಲಿ ಬಡವರಿಗೆ ಅತೀ‌ ಕಡಿಮೆ ದರದಲ್ಲಿ, ಉಚಿತವಾಗಿ ಚಿಕಿತ್ಸೆ ನೀಡುತ್ತಾ ಹಗಲು ಇರುಳು ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಅಶ್ರಫ್ ಅಪೋಲೋ ಕಲ್ಲಡ್ಕ. (ಬ್ಯಾರಿ ಸಂಗೀತ):

ಕಳೆದ 21 ವರ್ಷಗಳಿಂದ ಕಲಾವಿದನಾಗಿ ಬ್ಯಾರಿ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸುಮಾರು 60ಕ್ಕಿಂತ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಬ್ಯಾರಿ, ಕನ್ನಡ, ತುಳು, ಹಿಂದಿ ಹೀಗೆ ಸುಮಾರು 4,500 ಕ್ಕಿಂತ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ. 65 ರಷ್ಟು ಆಡಿಯೋ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ. ವಿವಿಧ ಟಿ.ವಿ.ಚಾನೆಲ್ ಗಳಲ್ಲಿ ಹಲವಾರು ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಿದ್ದಾರೆ. ಸುಮಾರು 300ರಷ್ಟು ವೇದಿಕೆಯಲ್ಲಿ ಸಂಗೀತ ರಸಮಂಜರಿ ನೀಡಿದ್ದಾರೆ. 17 ಬ್ಯಾರಿ ಹಾಡುಗಳನ್ನು ಹೊಸ ರಾಗ ಸಂಯೋಜನೆಯಲ್ಲಿ ಹಾಡಿದ್ದಾರೆ. ‘ಸುರುಮ’ ಎಂಬ ಸಿಡಿಯಲ್ಲಿ ಇವರು ರಾಗ ಸಂಯೋಜನೆಯಲ್ಲಿ ಎಂಟು ಹಾಡುಗಳ ಸಾಹಿತ್ಯ, ಹಾಡುಗಾರಿಕೆ ಇದೆ‌. ‘ಪಿರ್ಸಪ್ಪಾಡ್’ ಎಂಬ ಬ್ಯಾರಿ ಕವನ ಸಂಕಲನ ಪುಸ್ತಕ, 26 ರಷ್ಟು ವೀಡಿಯೊ ಆಲ್ಬಂ ಸಿಡಿಗಳನ್ನು ತಂದಿದ್ದಾರೆ.

ಡಾ.ಕೆ.ಎ.ಮುನೀರ್ ಬಾವಾ.( ಸಂಘಟಕರು) :

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕಡಂಬಾರ್ ಎಂಬಲ್ಲಿನ ಕೆ.ಅಬ್ದುಲ್ಲಾ ಮತ್ತು ಖತೀಜಮ್ಮ ದಂಪತಿಯ ಪ್ರಥಮ ಪುತ್ರನಾಗಿ 1976ರಲ್ಲಿ ಜನಿಸಿದ ಇವರು ಕಿರಿಯ ವಯಸ್ಸಿನಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರು. 2013ರಲ್ಲಿ ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದರು. ಜನಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಇವರು ಹಲವಾರು ಬಡ ಹೆಣ್ಣುಮಕ್ಕಳ ಮದುವೆಗೆ ಧನ ಸಹಾಯ, ಮತ್ತು ಅವರ ಮನೆಯ ರಿಪೇರಿ ಹಾಗೂ ವಿದ್ಯುಚ್ಛಕ್ತಿ ದುರಸ್ತಿ ಮುಂತಾದ ಕೆಲಸ ಕಾರ್ಯಗಳಿಗೆ ಧನಸಹಾಯವನ್ನು ಮಾಡಿದ್ದಾರೆ. ಉದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಮಲೇಶ್ಯದಲ್ಲಿ ಶ್ರೀಲಂಕಾ ಸರಕಾರದ ಕೌಲಾಲಂಪುರ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ನೀಡಿದೆ. ಕೀನ್ಯಾ ದೇಶದಲ್ಲಿ ನಡೆದ ಹತ್ತನೇ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ಕೂಡ ಇವರಿಗೆ ಸಿಕ್ಕಿದೆ.

ಮರಿಯಮ್ ಫೌಝಿಯಾ ಬಿ.ಯಸ್. ( ಮಹಿಳಾ ಸಾಧಕಿ):

ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿಗಳಲ್ಲಿರುವ ಕಾಲೇಜುಗಳನ್ನು ತಲುಪಲು ಕಡಬ ಪ್ರದೇಶದ ಮಕ್ಕಳಿಗೆ ಕನಿಷ್ಠ 25 ಕಿ.ಮೀ ಗಳ ಬಸ್ ಪ್ರಯಾಣಕ್ಕೆ ಒಳಮಾರ್ಗದಿಂದ 8-10 ಕಿ.ಮೀ.ಗಳ ದುರ್ಗಮ ದಾರಿ ಕ್ರಮಿಸಬೇಕು. ಜೊತೆಗೆ ಹೆಣ್ಣು ಮಕ್ಕಳು ತೀರಾ ಶಿಕ್ಷಣದಿಂದ ಹಿಂದುಳಿದಿದ್ದನ್ನು ಕಂಡು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಶೈಕ್ಷಣಿಕ ಹಿಂಜರಿಕೆ, ಮಾರ್ಗದರ್ಶನದ ಕೊರತೆಯನ್ನು ನೀಗಿಸಲು ಆರಂಭದಲ್ಲಿ ಇವರು ‘ಮರಳಿ ಬಾ ಶಾಲೆ’ಯನ್ನು ಸ್ಥಾಪಿಸಿ ಯಶಸ್ಸನ್ನು ಕಂಡಿದ್ದಾರೆ. ಇದು ಕಲಾ ಮತ್ತು ವಾಣಿಜ್ಯ ಪದವಿಗಳನ್ನು ಆರಂಭಿಸಲು ಪ್ರೇರಣೆ ನೀಡಿತು. ಮಕ್ಕಳ ಕೊರತೆಯನ್ನು ನಿವಾರಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆಯೂ ದೊರೆತಿದೆ. ಮಕ್ಕಳ ಪೋಷಕರ, ಶಿಕ್ಷಣಾಭಿಮಾನಿಗಳ ಸಹಕಾರ ಮತ್ತು ಬೆಂಬಲದೊಂದಿಗೆ ಕೇವಲ ಎರಡೇ ವರ್ಷಗಳಲ್ಲಿ 200ಕ್ಕೂ ಹೆಚ್ಚು ಮಕ್ಕಳನ್ನೂ ಹದಿಮೂರು ಮಂದಿ ಉಪನ್ಯಾಸಕರನ್ನೂ ಹೊಂದಿದ್ದರು. ಈ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದೊಂದಿಗೆ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ನೀಡುತ್ತಿದೆ.‌ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಸುಲ್ಯೆಮಾನ್ ಮತ್ತು ಆಸಿಯಮ್ಮ ದಂಪತಿ ಪುತ್ರಿಯಾಗಿರುವ ಮರಿಯಂ ಫೌಝಿಯಾ ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

ಬ್ಯಾರಿ ಝುಲ್ಫಿ ( ಯುವ ಪ್ರತಿಭೆ):

ಬ್ಯಾರಿ ಭಾಷೆಯಲ್ಲಿ ‘ಬ್ಯಾರಿ ಬಾಸ್’ ಹೀಗೆ ಹಲವಾರು ವೀಡಿಯೊ ಆಡಿಯೋ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾರಿ ಭಾಷೆಯಲ್ಲಿ ನೂರಾರು ಹಾಸ್ಯ ಮನೋರಂಜನಾ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ

ಮುಹಮ್ಮದ್ ಬಶೀರ್ ಉಸ್ತಾದ್, ಉಡುಪಿ (ಬ್ಯಾರಿ ದಫ್):

ಕರ್ನಾಟಕದಲ್ಲಿ 30ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ದಫ್ ತರಬೇತಿ ನೀಡಿದ್ದಾರೆ. ಸೌದಿ ಅರೇಬಿಯಾದಲ್ಲಿ 4 ಸ್ಥಳಗಳಲ್ಲಿ ತರಬೇತಿ ನೀಡಿದ್ದಾರೆ. ಹಲವು ಭಾಷೆಗಳಲ್ಲಿ ಹಾಡು ರಚಿಸಿ ಹಾಡಿರುವ ಈವರಿಗೆ ಸುಮಾರು 100ಕ್ಕಿಂತ ಹೆಚ್ಚು ಪ್ರಶಸ್ತಿಗಳು ಸಿಕ್ಕಿದೆ.

ಮುಹಮ್ಮದ್ ಫರಾಝ್ ಅಲಿ (ಬಾಲಪ್ರತಿಭೆ):

ಮಂಗಳೂರಿನ ನೀರುಮಾರ್ಗದ ಪ್ರೆಸಿಡೆನ್ಸಿ ಸ್ಕೂಲ್ ನ ಆರನೇ ತರಗತಿ ವಿದ್ಯಾರ್ಥಿಯಾಗಿರುವ ಈತನ ವಯಸ್ಸು 10. ರಾಷ್ಟ್ರೀಯ ಮಟ್ಟದ ಸ್ಪೀಡ್ ಸ್ಕೇಟರ್. ದಕ್ಷಿಣ ಭಾರತದ 7 ರಾಜ್ಯಗಳನ್ನು ಒಳಗೊಂಡ ಬೆಳಗಾವಿಯಲ್ಲಿ ನಡೆದ ಸಿಬಿಎಸ್ ಇ ಸೌತ್ ಝೋನ್ ಸ್ಕೂಲ್ ಗೇಮ್ಸ್ ನಲ್ಲಿ 1 ಚಿನ್ನ,1 ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಮೈಸೂರ್ ನಲ್ಲಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 1 ಬೆಳ್ಳಿ 1 ಕಂಚು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 2 ಚಿನ್ನ 1 ಬೆಳ್ಳಿ ಗೆದ್ದಿದ್ದಾರೆ. ಪಂಜಾಬ್ ನ ಚಂಡಿಗಢದಲ್ಲಿ ನಡೆದ ರಾಷ್ಟ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸುವ ಸ್ಪರ್ಧೆಯಲ್ಲಿ ಸತತವಾಗಿ 3 ವರ್ಷಗಳಿಂದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಕೇಟಿಂಗ್ ನಲ್ಲಿ 2 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಸಾಧಕರಾಗಿದ್ದಾರೆ.


Spread the love