ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕಾಲೇಜು ಮುಂದುವರಿಸಲು ಕೆ.ಪ್ರತಾಪಚಂದ್ರ ಶೆಟ್ಟಿ ಆಗ್ರಹ

Spread the love

ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕಾಲೇಜು ಮುಂದುವರಿಸಲು ಕೆ.ಪ್ರತಾಪಚಂದ್ರ ಶೆಟ್ಟಿ ಆಗ್ರಹ

ಕುಂದಾಪುರ: 2014 ರಲ್ಲಿ ಬ್ರಹ್ಮಾವರದಲ್ಲಿ ಆರಂಭವಾದ 2 ವರ್ಷದ ಕೃಷಿ ಡಿಪ್ಲೋಮಾ ಕೋರ್ಸುಗಳನ್ನು 2023-24ನೇ ಸಾಲಿನಿಂದ ಸ್ಥಗಿತಗೊಳಿಸಿರುವುದಕ್ಕೆ ಈ ಭಾಗದ ರೈತರು ಜಿಲ್ಲೆಯ ಐದು ಶಾಸಕರ ಹಾಗೂ ಆಡಳಿತ ಪ್ರಮುಖರ ಗಮನಕ್ಕೆ ತಂದಿದ್ದಾರೆ. ಆದರೆ ಯಾವ ಶಾಸಕರು ಸರ್ಕಾರಕ್ಕೆ ಪತ್ರ ಬರೆದಂತಿಲ್ಲ ಎಂದು ಉಡುಪಿ ಜಿಲ್ಲಾ ರೈತ ಸಂಘದ ಮುಖಂಡ, ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಆರ್.ಎನ್ ಶೆಟ್ಟಿ ಮಿನಿ ಹಾಲ್ನಲ್ಲಿ ಜರುಗಿದ ಉಡುಪಿ ಜಿಲ್ಲಾರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕಾಲೇಜು ಪುನಾರಾರಂಭಿಸಲು ರೈತರ ನಿಯೋಗದೊಂದಿಗೆ ಉಪ ಕುಲಪತಿಗಳನ್ನು ಭೇಟಿಯಾಗಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಅವರ ವ್ಯಾಪ್ತಿಯಲ್ಲಿ ಸಾಧ್ಯವಾಗದೇ ಇದ್ದರೆ ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಭೇಟಿಯಾಗಿ ಕಾಲೇಜನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಜಿಲ್ಲೆಯ ರೈತರ ಪರವಾಗಿ ಉಡುಪಿ ಜಿಲ್ಲಾ ರೈತ ಸಂಘ ಹಾಗೂ ಭಾರತೀಯ ಕಿಸಾನ್ ಸಂಘ ಮಾಡುತ್ತದೆ ಎಂದರು.

5 ಕೋಟಿ ರೂ. ಖರ್ಚು ಮಾಡಿ ಕಾಲೇಜನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ 5 ಕೋಟಿ ರೂ. ಹಣ ಖರ್ಚು ಮಾಡಿ ಹಾಸ್ಟೆಲ್ ನಿರ್ಮಾಣವನ್ನೂ ಮಾಡಿದ್ದಾರೆ. 2014 ರಿಂದ ಇಲ್ಲಿಯ ತನಕ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದರೂ ಹೊಸ ಶಿಕ್ಷಣ ಪದ್ದತಿಯನ್ನು ಮುಂದಿಟ್ಟುಕೊಂಡು ಕಾಲೇಜನ್ನು ಮುಚ್ಚಿರುವುದು ದುರಂತವೇ ಸರಿ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾಲೇಜನ್ನು ಪುನಾರಾರಂಭ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ ಎಂದು ಅವರು ಹೇಳಿದರು.

ಯಾವುದೇ ಸಂದರ್ಭದಲ್ಲೂ ಜಿಲ್ಲೆಯ ಇತಿಹಾಸದಲ್ಲಿ ರೈತರು ಪ್ರತಿಭಟನೆ ಮಾಡಿರುವುದನ್ನು ನಾವು ಕಂಡಿಲ್ಲ. ಸುಮಾರು 6 ವರ್ಷಗಳ ಕಾಲ ರೈತರು ಸಕ್ಕರೆ ಕಾರ್ಖಾನೆಗೆ ಕೊಟ್ಟಿರುವ ಕಬ್ಬಿನ ಹಣವನ್ನು ಸರ್ಕಾರ ಪಾವತಿ ಮಾಡದೇ ಇದ್ದ ಸಂದರ್ಭದಲ್ಲಿ ರೈತರು ಪ್ರತಿಭಟನೆ ಮಾಡಿಲ್ಲ. ಕಬ್ಬಿನ ಹಣ ಬಾಕಿಯಾದ ಸಂದರ್ಭದಲ್ಲಿ ಬಡ್ಡಿ ಸೇರಿ ಕೊಡಬೇಕೆನ್ನುವುದು ಕಾಯ್ದೆಯಲ್ಲಿದೆ. ಬಡ್ಡಿಯನ್ನು ಬಿಟ್ಟು ಕಬ್ಬಿನ ಹಣವನ್ನು ಮಾತ್ರ ಪಡೆದಿರುವ ದೃಷ್ಟಾಂತ ಇದ್ದರೆ ಅದು ಉಡುಪಿ ಜಿಲ್ಲೆಯ ರೈತರದ್ದು ಎಂದರು.

ನಮ್ಮದೇ ಜಿಲ್ಲೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಹಳೆಯ ಯಂತ್ರೋಪಕರಣಗಳನ್ನು ಗುಜರಿಗೆ ಮಾರಾಟ ಮಾಡಿ ಆಡಳಿತ ಕಮಿಟಿ ಹಗರಣ ಮಾಡಿದೆ. ಈ ಹಗರಣದ ಕುರಿತು ರಾಜ್ಯದ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳಿಗೆ ದೂರನ್ನು ಸಲ್ಲಿಸಿದ್ದೇವೆ. ಕಾರ್ಖಾನೆಗೆ ಬರುವ 15 ಕೋಟಿ ರೂ. ಹಣ ಬಾಕಿ ಇದ್ದರೂ ಕೂಡ ಇಲಾಖೆಯ ಯಾವ ಅಧಿಕಾರಿಯೂ ಅದನ್ನು ತನಿಖೆ ಮಾಡಲು ಹೋಗಿಲ್ಲ. ನಮಗೆ ಇದರಲ್ಲಿ ರಾಜಕಾರಣ ಮಾಡುವ ಉದ್ದೇಶ ಇಲ್ಲ. ಹಿಂದಿನ ಸರ್ಕಾರ ಇದ್ದ ಸಂದರ್ಭದಲ್ಲಿ ಇದನ್ನು ಪ್ರಸ್ತಾಪ ಮಾಡಿ ರಾಜಕಾರಣ ಮಾಡುವ ವ್ಯವಸ್ಥೆಗಳಿತ್ತು. ಆದರೆ ಯಾವುದೇ ಸಂದರ್ಭದಲ್ಲಿ ರೈತ ಸಂಘ ಮತ್ತು ಸಕ್ಕರೆ ಕಾರ್ಖಾನೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದು ಎಂಬ ಉದ್ದೇಶದ ಹಿನ್ನೆಲೆಯಲ್ಲಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಇದು ಪ್ರತಿಷ್ಠೆಯ ಹೋರಾಟವಲ್ಲ. ಸಾಕ್ಷ್ಯಾಧಾರಗಳು ನಮ್ಮ ಕೈಯ್ಯಲ್ಲಿವೆ. ಅಧಿಕಾರಿಗಳು ತನಿಖೆ ಮಾಡಲಿ ಮಾಡದೇ ಇರಲಿ. ನಾವು ಕಾನೂನಿನ ಪ್ರಕಾರ ಹೋರಾಟ ಮಾಡುತ್ತೇವೆ ಎಂದು ಪ್ರತಾಪಚಂದ್ರ ಶೆಟ್ಟಿ ಸ್ಪಷ್ಟಪಡಿಸಿದರು.

15 ಕೋಟಿ ಗುಜರಿ ಹಣವನ್ನು ತಿಂದು ನೀರು ಕುಡಿದವರು ಹನ್ನೊಂದನೆ ತಾರೀಕಿಗೆ ಸರ್ವಸದಸ್ಯರ ಸಭೆ ಕರೆದಿದ್ದಾರೆ. ಈ ಪರಿಸರದ ಪ್ರತಿಯೊಬ್ಬ ರೈತ ಮುಖಂಡರು ಹಣವನ್ನು ಕಟ್ಟಿ ಸದಸ್ಯತ್ವ ಮಾಡಿಕೊಂಡಿದ್ದಾರೆ. ಆದರೆ 11 ನೇ ತಾರೀಕಿನ ಸಭೆಗೆ ಸುಮಾರು 500 ಮಂದಿ ರೈತ ಮುಖಂಡರಿಗೆ ನೋಟೀಸ್ ಕೊಟ್ಟಿಲ್ಲ. ಇದನ್ನು ಪ್ರಶ್ನಿಸಿದಾಗ ಅರ್ಜಿ ಅಂಗೀಕರಿಸುವುದು ಸರ್ವಸದಸ್ಯರ ಸಭೆಯ ಬಳಿಕ ಎನ್ನುವ ಸಬೂಬು ಕೊಟ್ಟಿದ್ದಾರೆ. ಕಾಯ್ದೆಗಳ ಪ್ರಕಾರ ಯಾವುದೇ ಅರ್ಜಿಯನ್ನು ಪೂರ್ಣ ಹಣ ಪಡೆದ ಬಳಿಕ ಅವರ ಸದಸ್ಯತ್ವ ಮುಂದುವರೆಸಲಾಗುವುದು. ರೈತ ಮುಖಂಡರನ್ನು ಹೊರಗಿಡುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಹಗರಣದ ಕುರಿತು ತನಿಖೆ ಮಾಡಿ ಸಕ್ಕರೆ ಕಾರ್ಖಾನೆ ಆಡಳಿತ ಕಮಿಟಿ ಬರ್ಖಾಸ್ತಾದರೆ ಮರಳಿ ಕಮಿಟಿ ಮಾಡುವಾಗ ರೈತ ಸಂಘದ ಪ್ರತಿನಿಧಿಗಳು ಸೇರಿಕೊಂಡರೆ ತಮ್ಮ ಕುರ್ಚಿಗೆ ತೊಂದರೆಗಳಾಗಬಹುದು ಎನ್ನುವ ವಿಕೃತಮನೋಭಾವನೆ ಇವರದು ಎಂದು ಜರಿದರು.

ಸಕ್ಕರೆ ಕಾರ್ಖಾನೆಯಲ್ಲಿ ಸಮ್ಮಿಶ್ರ ಸರ್ಕಾರವಿದೆ!:
ರೈತ ಸಂಘದ ಯಾವುದೇ ಪ್ರತಿನಿಧಿಗಳಿಗೆ ಸಕ್ಕರೆ ಕಾರ್ಖಾನೆ ಆಡಳಿತ ಕಮಿಟಿಯಲ್ಲಿ ಸದಸ್ಯರಾಗಲು ಅವಕಾಶ ಕೊಡದಿದ್ದರೆ ರೈತ ಸಂಘ ತೀಕ್ಷ್ಣವಾಗಿ ಹೋರಾಟ ಕೈಗೊಳ್ಳಬೇಕಾಗುತ್ತದೆ. ಇದು ಉತ್ಪøಕ್ಷೆಯಲ್ಲ. ಸಕ್ಕರೆ ಕಾರ್ಖಾನೆಯಲ್ಲಿ ಹಗರಣ ನಡೆದಿದೆ. ಯಾವುದೇ ಸಂಸ್ಥೆಯ ಅಡಿಪಾಯದ ಕಲ್ಲನ್ನು ಕಿತ್ತು ಮಾರಾಟ ಮಾಡಿದ ಉದಾಹರಣೆಯನ್ನು ನಾವು ಕಂಡಿಲ್ಲ. ಆದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಇದೆಲ್ಲವೂ ಸಾಧ್ಯವಾಗಿದೆ. ಕಾಂಗ್ರೆಸ್ ಸರಿ ಇಲ್ಲದಿದ್ದರೆ ಬಿಜೆಪಿಯವರು ಕೇಳಬಹುದಾಗಿತ್ತು. ಬಿಜೆಪಿ ಸರಿ ಇಲ್ಲದಿದ್ದರೆ ಕಾಂಗ್ರೆಸ್ನವ್ರು ಕೇಳಬಹುದಿತ್ತು. ಆದರೆ ಇಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಎರಡೂ ಪಕ್ಷದವರು ಅಧಿಕಾರದಲ್ಲಿದ್ದಾರೆ. ಹಾಗಾಗಿ ಎರಡು ಪಕ್ಷದವರು ಮಾತನಾಡುತ್ತಿಲ್ಲ ಎಂದು ಕೆ. ಪ್ರತಾಪಚಂದ್ರ ಶೆಟ್ಟಿ ಕಟುವಾಗಿ ಟೀಕಿಸಿದರು.

ಸಭೆಯಲ್ಲಿ ರೈತ ಮುಖಂಡರಾದ ವಿಕಾಸ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬಾಬು ಶೆಟ್ಟಿ ತೆಗ್ಗರ್ಸೆ, ಉದಯ್ ಕುಮಾರ್ ಶೆಟ್ಟಿ ವಂಡ್ಸೆ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಮಲ್ಯಾಡಿ ಶಿವರಾಮ್ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಡಾ. ಅತುಲ್ ಕುಮಾರ್ ಶೆಟ್ಟಿ, ಮಂದಾರ್ತಿ ಕೃಷ್ಣ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಶಿರಿಯಾರ, ಸೀತಾರಾಮ ಗಾಣಿಗ, ಶರತ್ಚಂದ್ರ ಶೆಟ್ಟಿ ಕಾವ್ರಾಡಿ, ರೋಹಿತ್ ಕುಮಾರ್ ಶೆಟ್ಟಿ ಬ್ರಹ್ಮಾವರ, ಸಂಪಿಗೇಡಿ ಸಂಜೀವ ಶೆಟ್ಟಿ, ಹಾಲಾಡಿ ಸರ್ವೋತ್ತಮ ಹೆಗ್ಡೆ, ಚೋರಾಡಿ ಅಶೋಕ ಶೆಟ್ಟಿ, ಮರತೂರು ಚಂದ್ರಶೇಖರ ಶೆಟ್ಟಿ, ಬೆಳ್ವೆ ಜಯರಾಮ ಶೆಟ್ಟಿ ಮತ್ತಿತರರು ಇದ್ದರು.


Spread the love

Leave a Reply

Please enter your comment!
Please enter your name here