Home Mangalorean News Kannada News ಬ್ರಹ್ಮಾವರ: ಅಕ್ರಮ ಮರಳು ದಂಧೆಯ ವಿರುದ್ದ ವಾರಂಬಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರ ಧರಣಿ

ಬ್ರಹ್ಮಾವರ: ಅಕ್ರಮ ಮರಳು ದಂಧೆಯ ವಿರುದ್ದ ವಾರಂಬಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರ ಧರಣಿ

Spread the love

ಬ್ರಹ್ಮಾವರ: ಸಾಂಪ್ರಾದಾಯಿಕ ಮರಳುಗಾರಿಕೆ ಹೆಸರಿನಲ್ಲಿ ನಡೆಯುವ ಅಕ್ರಮ ಮರಳು ದಂಧೆಯ ವಿರುದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮಂಗಳವಾರ ಒಂದು ದಿನದ ಸಾಂಕೇತಿಕ ಧರಣಿಯನ್ನು ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾರಂಬಳ್ಳಿ ಗ್ರಾಮಪಂಚಾಯತ್ ಸದಸ್ಯರು ಬಿರ್ತಿ ರಾಜೇಶ್ ಶೆಟ್ಟಿ ಅವರು ಪ್ರಜಾಪ್ರಭುತ್ವದ ಅಡಿಪಾಯವಾದ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಗ್ರಾಮಪಂಚಾಯತಿನಿಂದ ಯಾವುದೇ ನಿರಪೇಕ್ಷಣಾ ಪತ್ರ ಇಲ್ಲದೆ ಬರೇ ಸ್ವಹಿತಕ್ಕಾಗಿ ಕಟ್ಟಿಕೊಂಡ ಮರಳು ಯೂನಿಯನ್‍ನ ನಿರಾಕ್ಷೇಪಣಾ ಪತ್ರದಿಂದ ಉಡುಪಿ ಜಿಲ್ಲಾಧಿಕಾರಿಗಳು ಮರಳುಗಾರಿಕೆಗೆ ಅನುಮತಿ ನೀಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಉಲ್ಲಂಘನೆಯಾಗಿದೆ. ಅವರ ಅನುಮತಿಯಿಂದಾಗಿ ಬ್ರಹ್ಮಾವರ ಹಾಗೂ ಆಸುಪಾಸಿನ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮರಳು ಮಾಫಿಯಾದ ದೊಡ್ಡ ಲಾಭಿಯೇ ನಡೆಯುತ್ತಿದೆ. ಮರಳು ಮಾಫೀಯಾ ಧಂಧೆಯಿಂದಾಗಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಪ್ರತಿನಿತ್ಯ 200 ರಿಂದ 300 ಲಾರಿಗಳು 13 ರಿಂದ 15 ಟನ್ ಮರಳನ್ನು ತುಂಬಿಕೊಂಡು ಹೊರ ಜಿಲ್ಲೆಗಳಿಗೆ ಸಾಗಾಟಾವಾಗುವುದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮತ್ತು ಮನೆ ಕಟ್ಟುವ ಬಡವರಿಗೆ ಮರಳು ಸಿಗುತ್ತಿಲ್ಲ.

ಮರಳುಗಾರಿಕೆಯಿಂದ ಹೊಳೆ ಬದಿಯ ಕೊರೆತ ಉಂಟಾಗಿ ಹೊಳೆ ಬದಿ ಕಟ್ಟಿದ ಕಲ್ಲುಗಳು ಜಾರಿ ಬೀಳುವುದರಿಂದ ಸರಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತಿದೆ. ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕಾದರೆ 26 ನಿಯಮಗಳನ್ನು ತಿಳಿಸಿದ್ದು ಯಾವುದೇ ಮರಳು ಸಾಗಾಟಾದಾರರು ಅಥವಾ ಮರಳುಗಾರಿಕೆ ನಡೆಸುವವರು ಒಂದೇ ಒಂದು ನಿಯಮವನ್ನು ಪಾಲಿಸುತ್ತಿಲ್ಲ. ಮೀನು ಸಂತತಿ ನಾಶವಾಗಿ ಮತ್ಸ್ಯಕ್ಷಾಮ, ಮತ್ತು ಹೊಳೆಯ ಆಳದ ಅರಿವಿಲ್ಲದೆ ಹೊಳೆ ಇಳಿಯುವ ಮೀನುಗಾರರ ಮಕ್ಕಳು ಮತ್ತು ಮಹಿಳೆಯರಿಗೆ ಪ್ರಾಣಭೀತಿ ಎದುರಾಗುತ್ತಿದೆ. ಮಕ್ಕಳು ಮತ್ತು ವೃದ್ದರು ರಸ್ತೆಯಲ್ಲಿ ಬರುವ ಭಾರಿ ಗಾತ್ರದ ಮರಳು ಲಾರಿಗಳಿಂದಾಗಿ ನಡೆದಾಡಲು ಕೂಡ ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಕೂಡಲೇ ಮರಳು ನೀತಿಯನ್ನು ಜಾರಿಗೆ ತರವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತಾನಾಡಿದ ಸ್ಥಳೀಯ ನೀವಾಸಿ ಮಲ್ಲಿಕಾ ಅವರು ನಾವು ಹಲವಾರು ವರ್ಷಗಳಿಂದ ಕುದ್ರುಗಳಲ್ಲಿ ವಾಸಮಾಡಿಕೊಂಡು ಬಂದಿದ್ದು ಪ್ರತಿಯೊಂದು ವಸ್ತುಗಳನ್ನು ನಾವು ದೋಣಿಗಳ ಮೂಲಕವೇ ನಮ್ಮ ಮನೆಗೆ ಸಾಗಿಸಬೇಕು. ಇತ್ತೀಚಿನ ದಿನಗಳಿಂದ ನಡೆಯುತ್ತಿರುವ ಮರಳುಗಾರಿಕೆಯಿಂದಾಗಿ ನದಿಯ ದಡದಲ್ಲಿ ದೊಡ್ಡ ದೊಡ್ಡ ಮರಳು ರಾಶಿಗಳಿಂದ ನಮಗೆ ಯಾವುದೇ ವಸ್ತುಗಳನ್ನು ಸಾಗಿಸಲು ಕೂಡ ಸಾಧ್ಯವಾಗುತ್ತಿಲ್ಲ. ಕುದ್ರುಗಳಲ್ಲಿ ವಾಸ ಮಾಡುತ್ತಿರುವ ನದಿ ಕೊರೆತದಿಂದಾಗಿ ನಮ್ಮ ಮನೆಗಳು ಕುಸಿಯುವ ಭೀತಿಯಿಂದ ಮನೆ ತೋಟ ಬಿಟ್ಟು ಹೋಗುವ ಪರಿಸ್ಥಿತಿಗೆ ಬಂದಿದ್ದೇವೆ. ಇಲ್ಲಿನ ಮರಳು ತೆಗೆಯಲು ಬಂದಿರುವ ಉತ್ತರ ಭಾರತದ ಜನರು ಪ್ರತಿನಿತ್ಯ ಕುಡಿದು ಗಲಾಟೆ ಮಾಡುವುದು ಮಹಿಳೆಯರನ್ನು ಚುಡಾಯಿಸುವ ಕೆಲಸಗಳನ್ನು ಮಾಡುತ್ತಿದ್ದು, ಅಕ್ರಮ ಮರಳುಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದಲ್ಲದೆ, ಯುವಕರ ಮೇಲೆ ನಡೆಸಿ ಕೇಸು ದಾಖಲಿಸುತ್ತಾರೆ ಎಂದು ದೂರಿದರು.

ಸ್ಥಳಕ್ಕೆ ಗಣಿ ಇಲಾಖೆಯ ಉಪನಿರ್ದೇಶಕ ಮಹದೇಶ್ವರ ಹಾಗೂ ಬ್ರಹ್ಮಾವರ ಉಪತಹಶೀಲ್ದಾರ್ ವಸಂತ ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ವಾದವಿವಾದಗಳು ನಡೆದವು.

ಪ್ರತಿಭಣಟನೆಯ ವಾರಂಬಳ್ಳಿ ಗ್ರಾಮಪಂಚಾಯತಿನ 18 ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರಾದ ಮಲ್ಲಿಕಾ ಬಾಲಕೃಷ್ಣ, ಗೋಪಿಕೆ ನಾಯ್ಕ, ತಾಲೂಕು ಪಂಚಾಯತ್ ಸದಸ್ಯರಾದ ಉಮೇಶ್ ನಾಯ್ಕ್, ವಿಠಲ ಪೂಜಾರಿ, ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ, ಎಸ್ ನಾರಾಯಣ್, ನಿತ್ಯಾನಂದ ಶೆಟ್ಟಿ ಇನ್ನಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version