
ಭತ್ತ, ರಾಗಿ ಖರೀದಿ ಕೇಂದ್ರ ಉದ್ಘಾಟನೆ
ಮೈಸೂರು: ಹಲವು ದಿನಗಳಿಂದ ರೈತರ ಬೇಡಿಕೆಯಾಗಿದ್ದ ಭತ್ತ, ರಾಗಿ ಖರೀದಿ ಕೇಂದ್ರವನ್ನು ತೆರೆಯುವ ಜತೆಗೆ ರೈತರಿಂದ ಖರೀದಿ ಮಾಡುವುದಕ್ಕೂ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕೃಷಿ ಮಾರಾಟ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸಹಯೋಗದಲ್ಲಿ ಬಂಡೀಪಾಳ್ಯದಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭತ್ತ, ರಾಗಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ರೈತರು ತಂದಿದ್ದ ಭತ್ತ, ರಾಗಿ ಚೀಲಗಳನ್ನು ತೂಕ ಹಾಕುವ ಮೂಲಕ ಖರೀದಿಗೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ರೈತರಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಿ ಖರೀದಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದರಿಂದ ರೈತರು ನೇರವಾಗಿ ತಂದು ಕೊಡಬೇಕು. ಯಾವುದೇ ದಲ್ಲಾಳಿಗಳು, ವ್ಯಾಪಾರಿಗಳ ಮೂಲಕ ಖರೀದಿಗೆ ಕೊಡದೆ ನೇರವಾಗಿ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಿದರೆ ಹೆಚ್ಚು ಆದಾಯ ಬರಲಿದೆ.
ಬಂಡೀಪಾಳ್ಯದಲ್ಲಿ ಮಾರುಕಟ್ಟೆ ತರಲು ಅನೇಕ ಶ್ರಮಪಡಲಾಯಿತು. ಅನೇಕರು ವಿರೋಧ ಮಾಡಿದರೂ ಲೆಕ್ಕಿಸದೆ ಆರಂಭಿಸಿದ್ದರಿಂದ ದೊಡ್ಡದಾಗಿ ಬೆಳೆಯಲು ಕಾರಣವಾಯಿತು. ನಬಾರ್ಡ್ ಮೂಲಕ 30 ಕೋಟಿ ರೂ.ಅನುದಾನವನ್ನು ಕೊಡಿಸಿ ಎಪಿಎಂಸಿ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರುಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವರ ಕಾರ್ಯ ವೈಖರಿ ಬಗ್ಗೆ ಅರಿಯದೆ ಟೀಕೆ ಮಾಡುವುದು ಸರಿಯಲ್ಲ. ಸಹಕಾರ ಮತ್ತು ಎಪಿಎಂಸಿಗಳ ಅಭಿವೃದ್ಧಿಗೆ ಯಾವ್ಯಾವ ಕೆಲಸ. ಮಾಡಿದ್ದಾರೆ ಎನ್ನುವುದನ್ನು ಅರಿತು ಮಾತನಾಡಬೇಕು ಹೊರತು ಸುಮ್ಮನೆ ವಿರೋಧ ಮಾಡುವುದಲ್ಲ ಎಂದು ಹೇಳಿದರು.
2022-23ನೇ ಸಾಲಿನ ಮುಂಗಾರು ಋತುವಿನ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಖರೀದಿಸಲು ತೀರ್ಮಾನಿಸಿದ್ದು, ಮಾರ್ಚ್ 31ರವರೆಗೆ ಏಳು ತಾಲೂಕುಗಳಲ್ಲಿ ತೆರೆದಿರುವ ಕೇಂದ್ರಗಳಲ್ಲಿ ಖರೀದಿ ಮಾಡಲಾಗುತ್ತದೆ. ಪ್ರತಿ ಕ್ವಿಂಟಾಲ್ ಮಾಮಾನ್ಯ ಭತ್ತವನ್ನು 2040ರೂ, ಗ್ರೇಡ್-ಎ ಭತ್ತವನ್ನು 2060 ರೂ, ರಾಗಿಯನ್ನು 3578 ರೂ.ಗೆ ಖರೀದಿಸಲಾಗುತ್ತದೆ. ಬಂಡೀಪಾಳ್ಯ, ನಂಜನಗೂಡು, ತಿ.ನರಸೀಪುರ, ಬನ್ನೂರು, ಹುಣಸೂರು, ರತ್ನಪುರಿ, ಕೃಷ್ಣರಾಜ ನಗರ, ಸಾಲಿಗ್ರಾಮ, ಸಂತೆ ಸರಗೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಬೆಟ್ಟದಪುರ ಎಪಿಎಂಸಿ ಆವರಣ, ಬಿಳಿಗೆರೆ ಖರೀದಿ ಕೇಂದ್ರ, ಚುಂಚನಕಟ್ಟೆ ಪ್ರವಾಸಿಮಂದಿರ ಆವರಣದಲ್ಲಿ ಖರೀದಿಸಲಾಗುತ್ತದೆ. ಈಗಾಗಲೇ ರಾಗಿ ಖರೀದಿಗೆ 11712 ರೈತರು, ಭತ್ತ ಖರೀದಿಗೆ 39237 ರೈತರು ನೋಂದಣಿ ಮಾಡಿಕೊಂಡಿದ್ದರೆ, 360566 ಕ್ವಿಂಟಾಲ್ ಭತ್ತ, 619733 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುತ್ತದೆ.
ಮೇಯರ್ ಶಿವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ್, ಪ್ರಧಾನ ವ್ಯವಸ್ಥಾಪಕಿ ಪುಷ್ಪಾ, ಮೈಸೂರು ಎಪಿಎಂಸಿ ಕಾರ್ಯದರ್ಶಿ ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಪಿರಿಯಾಪಟ್ಟಣ ಎಪಿಎಂಸಿ ಕಾರ್ಯದರ್ಶಿ ರೇವತಿ ಹಾಜರಿದ್ದರು.