ಭಯಭೀತರಾದ ಜನತೆಗೆ ಧೈರ್ಯ ತುಂಬುವ ಕೆಲಸ ಶಾಸಕರು ಮೊದಲು ಮಾಡಲಿ – ಗೋಪಾಲ ಪೂಜಾರಿ

Spread the love

ಭಯಭೀತರಾದ ಜನತೆಗೆ ಧೈರ್ಯ ತುಂಬುವ ಕೆಲಸ ಶಾಸಕರು ಮೊದಲು ಮಾಡಲಿ – ಗೋಪಾಲ ಪೂಜಾರಿ

ಕುಂದಾಪುರ: ತನ್ನ ಕ್ಷೇತ್ರದಲ್ಲಿ ಆದ ಘಟನೆಗಳಿಗೆ ಆ ಭಾಗದ ಶಾಸಕರು ಮೊದಲು ಸ್ಪಂದಿಸಬೇಕು. ಇದು ಓರ್ವ ಜನಪ್ರತಿನಿಧಿಯಾದವರ ಕರ್ತವ್ಯ‌. ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಭಯಭೀತರಾದ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಗುದ್ದಲಿ ಪೂಜೆ ಮಾಡದಿದ್ದರೆ ಮುಳುಗಿ ಹೋಗೋದೇನು ಇಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ‌ ಶಾಸಕ ಕೆ ಗೋಪಾಲ ಪೂಜಾರಿ ಕಿಡಿಕಾರಿದ್ದಾರೆ.

ಅವರು ಗುರುವಾರ ಸಂಜೆ ಇಲ್ಲಿನ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುದೂರು ಭಾಗದ ಡೆಂಗ್ಯೂ ಪೀಡಿತರ ಆರೋಗ್ಯ ವಿಚಾರಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ‌ಮಾತುಕತೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು‌.

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮುದೂರು ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ. ಕೋವಿಡ್ ಬಳಿಕ ಇದೀಗ ಡೆಂಗ್ಯೂ ಆ ಭಾಗದ ಜನರನ್ನು ಭಯಭೀತರನ್ನಾಗಿ ಮಾಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವವರ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದೇನೆ. ಈಗಾಗಲೇ ಎಂಭತ್ತು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಮೂವತ್ತಕ್ಕೂ ಅಧಿಕ ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇದು ವ್ಯಾಪಿಸದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ವಹಿಸಬೇಕು ಎಂದರು.

ಉಸ್ತುವಾರಿ ಸಚಿವ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಅವರು, ದ.ಕ ದಲ್ಲಿರುವ ಉಸ್ತುವಾರಿ ಸಚಿವರಿಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಥಳೀಯ ಶಾಸಕರು ಗಮನಕ್ಕೆ ತರಬೇಕು. ಅವರ ಗಮನಕ್ಕೆ ತಂದರೆ ಮಾತ್ರ ಸಚಿವರು ಭೇಟಿ‌ ನೀಡಿ ವಿಶೇಷ ಸಭೆ ಕರೆದು ಅಧಿಕಾರಿಗಳಿಗೆ ಕಾರ್ಯಪ್ರವೃತ್ತರಾಗಲು ಸೂಚನೆ ನೀಡುತ್ತಾರೆ. ಸ್ಥಳೀಯ ಶಾಸಕರು ಸಚಿವರ ಗಮನ ಸೆಳೆಯುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ. ಇವರಿಗೆ ಜನತೆಯ ಆರೋಗ್ಯಕ್ಕಿಂತ ಗುದ್ದಲಿ ಪೂಜೆಯೇ ಮುಖ್ಯವಾಗಿ‌ ಹೋಗಿದೆ‌. ಜನರಿಗೆ ನೆಮ್ಮದಿಯ ವಾತಾವರಣ ಕಲ್ಪಿಸಿಕೊಟ್ಟು ಆ ಬಳಿಕ ಗುದ್ದಲಿ ಪೂಜೆ ಮಾಡಿಕೊಳ್ಳಲಿ ಎಂದು ಮಾಜಿ ಶಾಸಕ‌ ಪೂಜಾರಿ ವ್ಯಂಗ್ಯವಾಡಿದರು.

ಖಾಗಸಗಿ‌ ಆಸ್ಪತ್ರೆಯಲ್ಲೂ ಅನೇಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ವೈದ್ಯಕೀಯ ವೆಚ್ಚವನ್ನೂ ಸರ್ಕಾರವೇ ಬರಿಸಬೇಕು ಎಂದು ಆಗ್ರಹಿಸಿದ ಅವರು, ಮುದೂರು ಭಾಗಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ‌ ಮಾತುಕತೆ ನಡೆಸಿ, ಭಯಭೀತರಾದ ಜನರಿಗೆ ಧೈರ್ಯ ತುಂಬುತ್ತೇನೆ ಎಂದರು.


Spread the love