Home Mangalorean News Kannada News ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲ : ಜನಾರ್ದನ ತೋನ್ಸೆ

ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲ : ಜನಾರ್ದನ ತೋನ್ಸೆ

Spread the love

ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲ : ಜನಾರ್ದನ ತೋನ್ಸೆ

ಉಡುಪಿ : ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರ ಅಧಿಕಾರಕ್ಕೆ ಬಂದು 4 ವರ್ಷಗಳು ಕಳೆದರೂ ಚುನಾವಣಾ ಪೂರ್ವ ಘೋಷಿಸಿದ್ದ ಯಾವುದೇ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಜನಾರ್ದನ ತೋನ್ಸೆ ಹೇಳಿದ್ದಾರೆ.

ಚುನಾವಣೆಗೆ ಮುನ್ನ ತಾವು ಅಧಿಕಾರಕ್ಕೆ ಬಂದರೆ. ರೂ.15 ಲಕ್ಷ ಜನರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿತ್ತು. ಬಳಿಕ ನೋಟು ಅಮಾನ್ಯ ಮಾಡಿ ಕಪ್ಪು ಹಣ ಹೊರತರುವುದಾಗಿ ಹೇಳಿತ್ತು ಆದರೆ ಗುಡ್ಡೆಯನ್ನು ಅಗೆದು ಇಲಿಯನ್ನು ಹಿಡಿದ ಗಾದೆಯಂತಾಯಿತು ಕೇಂದ್ರ ನಡೆ. ಕಳೆದ ಯುಪಿಎ ಸರಕಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 140 ಡಾಲರ್ ಇದ್ದಾಗಲೂ ರೂ.69ಕ್ಕೆ ಪೆಟ್ರೋಲ್ ಹಾಗೂ 57ಕ್ಕೆ ಡಿಸೆಲ್ ದೊರಕುತ್ತಿತ್ತು. ಆದರೆ ಮೋದಿ ಸರಕಾರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿತ ಕಂಡರೂ ದೇಶದಲ್ಲಿ ಮಾತ್ರ ಪೆಟ್ರೋಲ್ ಹಾಗೂ ಡಿಸೆಲ್ ದರ ಹೆಚ್ಚಳಗೊಂಡಿದೆ. ಕೇಂದ್ರ ಸರಕಾರದ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿಯ ಅಸಮರ್ಪಕ ಜಾರಿಯಿಂದ ವ್ಯಾಪರಸ್ಥರು, ಉತ್ಪಾದಕರು, ಮತ್ತು ಜನತೆ ಸಂಕಷ್ಟಕ್ಕೀಡಾಗಿದ್ದಾರೆ ಭಾರತ ಇಂದು ಪ್ರಪಂಚದಲ್ಲಿ ಅತೀ ಹೆಚ್ಚು ತೆರಿಗೆ ವಿಧಿಸುವ ಎರಡನೇ ದೇಶವಾಗಿ ಮಾರ್ಪಟ್ಟಿದೆ. ಒಂದೇ ದೇಶ ಒಂದೇ ತೆರಿಗೆ ಎಂಬ ಘೋಷಣೆಯ ಮೂಲಕ ಜಿ.ಎಸ್.ಟಿ.ಯನ್ನು ಜಾರಿಗೆ ಮಾಡಲಾಗಿದೆಯಾದರೂ ತೆರಿಗೆ ಏಕರೂಪವಾಗಿಲ್ಲ. ಇದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದ್ದು ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವ ಕೇಂದ್ರದ ಭರವಸೆ ಹುಸಿಯಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉದ್ಭವವಾಗಿದೆ. ಸರಕಾರ ಭ್ರಷ್ಟಾಚಾರ ಮುಕ್ತದ ಭರವಸೆ ನೀಡಿದರೂ ಬ್ಯಾಂಕ್‍ಗಳನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರುವುದೂ ಅಲ್ಲದೆ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಕಳಂಕಿತ ವ್ಯಕ್ತಿಗಳನ್ನು ಸ್ಪರ್ಧಿಸಲು ಅವಕಾಶ ನೀಡಿ ಅವರ ಪರ ಪ್ರಚಾರ ನಡೆಸುವ ಮೂಲಕ ಅವರ ಬೆಂಗಾವಲಾಗಿ ಮೋದಿಯವರು ನಿಂತಿರುವುದು ಭ್ರಷ್ಟಾಚಾರವನ್ನು ಪೋಷಿಸುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆ.

2015-16 ಮತ್ತು 2016-17ರ ಸಾಲಿನಲ್ಲಿ ಬಿಜೆಪಿ ಆದಾಯದಲ್ಲಿ ಶೇ.81.18 ರಷ್ಟು ಭಾರಿ ಏರಿಕೆ ಕಂಡಿದೆ. ಒಟ್ಟು 1034.27 ಕೋಟಿಗೂ ನಿವ್ವಳ ಸಂಪತ್ತಿನೊಂದಿಗೆ ದೇಶದ ಶ್ರೀಮಂತ ರಾಜಕೀಯ ಪಕ್ಷ ಎಂದು ದಾಖಲಿಸಿದೆ. ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿದರೂ, ಜಿ.ಎಸ್.ಟಿ. ಮೂಲಕ ಬಡ, ಮಧ್ಯಮ ವರ್ಗದವರಿಗೆ ಬೆಲೆ ಏರಿಕೆಯ ಹೊರೆ ನೀಡಿದರೂ ಬಿಜೆಪಿ ತನ್ನ ಆದಾಯವನ್ನು ಏರಿಸಿಕೊಂಡಿರುವುದು ದೇಶದ ಆರ್ಥಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಮೋದಿ ನೇತೃತ್ವದ ಸರಕಾರ 4 ವರ್ಷಗಳ ಅವಧಿಯಲ್ಲಿ ಏನು ಮಾಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. “ಅಚ್ಚೇ ದಿನ್ ಆಯೇಗಾ” ಎಂಬ ಭರವಸೆ ಏನಾಗಿದೆ? ಯಾರಿಗಾದರೂ ಒಳ್ಳೆಯ ದಿನ ಬಂದಿದೆಯೋ? ಈ ಹಿಂದೆ ಇದ್ದ ದೇಶದ ತಲಾ ಆದಾಯ ಗಣನೀಯವಾಗಿ ಇಳಿಸಿರುವುದೇ ಕೇಂದ್ರ ಸರಕಾರದ ಸಾಧನೆಯಾಗಿದೆ ಉದ್ಯೋಗ ಸೃಷ್ಟಿಸುತ್ತೇನೆ ಎಂದವರು ನಿರುದ್ಯೋಗಿಗಳಿಗೆ ಪಕೋಡ ಮಾರಲು ಸಲಹ ನೀಡುತ್ತಾರೆ. ಮೋದಿ ಬಗ್ಗೆ ಇದ್ದ ನಿರೀಕ್ಷೆಗಳು ಹುಸಿಯಾಗಿದೆ. ಹಾಗೆಯೇ ಮೋದಿ ಸಂಪುಟದಲ್ಲಿ ನಾಲ್ಕು ಮಂದಿ ಕನ್ನಡಿಗ ಸಚಿವರಿದ್ದರೂ ರಾಜ್ಯಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಪ್ರತಿಕ್ರಿಯಿಸಿದ್ದಾರೆ.


Spread the love

Exit mobile version