ಭಾರತದಲ್ಲಿ ಚೀನಾಗಿಂತಲೂ ಹೆಚ್ಚು ಯುವ ಸಮುದಾಯವಿದೆ

Spread the love

ಭಾರತದಲ್ಲಿ ಚೀನಾಗಿಂತಲೂ ಹೆಚ್ಚು ಯುವ ಸಮುದಾಯವಿದೆ

ಮೈಸೂರು: ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿದ್ದು, ಯುವಕರೇ ಭಾರತದ ಭದ್ರ ಬುನಾದಿಯಾಗಿzರೆ ಎಂದು ನೆಹರೂ ಯುವ ಕೇಂದ್ರದ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ವತಿಯಿಂದ ಸೋಮವಾರ ಆಯೋಜಿಸಿದ್ದ ಭಾರತ-ಬಾಂಗ್ಲಾದೇಶ ಸಂಬಂಧಗಳು-ಅಂತಾರಾಷ್ಟ್ರೀಯ ಶಾಂತಿ ಮತ್ತು ತಿಳಿವಳಿಕೆಯ ಪ್ರಚಾರದಲ್ಲಿ ಯುವಜನರ ದೃಷ್ಟಿಕೋನ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಮ್ಮದು ಯುವ ಭಾರತ ಎನಿಸಿದ್ದು, ಪ್ರಪಂಚದ ಗಮನ ಸೆಳೆಯುತ್ತಿದೆ. ದೇಶದ 133 ಕೋಟಿ ಜನರಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ. ಯುವ ನೀತಿಯ ಪ್ರಕಾರ 15ರಿಂದ 29 ವರ್ಷದವರನ್ನು ಯುವಜನರು ಎಂದು ಕರೆಯಲಾಗಿದೆ. ಅಂಥವರು ನಮ್ಮಲ್ಲಿ 45 ಕೋಟಿ ಜನರಿದ್ದಾರೆ. ವಿಶ್ವದಲ್ಲಿ ಚೀನಾ ದೇಶ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೂ, ಚೀನಾಗಿಂತಲೂ ಭಾರತದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ ಎಂದರು.

ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಯುವಜನ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಉಭಯ ದೇಶಗಳ ನಡುವೆ ಪರಿಣಾಮಕಾರಿ ಸಂಬಂಧ ವೃದ್ಧಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಪರಸ್ಪರ ಶಾಂತಿ ಮತ್ತು ಸಹೋದರತ್ವ ವೃದ್ಧಿಸುವುದು, ಜತೆಗೆ ಯುವಜನರಿಗೆ ಅಂತಾರಾಷ್ಟ್ರೀಯ ಪರ್ಯಟನೆಗೆ ಅವಕಾಶ ಒದಗಿಸಿಕೊಡುವುದು ಹಾಗೂ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಎನ್‌ಎಸ್‌ಎಸ್-ಇಟಿಐ ಸಂಯೋಜಕ ಪ್ರೊ.ಬಿ.ಚಂದ್ರಶೇಖರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೃಷ್ಣಯ್ಯ, ಡೀನ್ ಪ್ರೊ.ಸಿ.ಗುರುಸಿದ್ದಯ್ಯ, ಮೈಸೂರು ವಿವಿ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಜಿ.ಆರ್. ಜನಾರ್ದನ್ ಇತರರಿದ್ದರು.


Spread the love