ಭಾರತ್‌ ಬಂದ್‌ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ, ಸಂಘಟನೆಗಳಿಂದ ಪ್ರತಿಭಟನೆ

Spread the love

ಭಾರತ್‌ ಬಂದ್‌ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ, ಸಂಘಟನೆಗಳಿಂದ ಪ್ರತಿಭಟನೆ

ಉಡುಪಿ: ಕೃಷಿ ಮಸೂದೆಗಳನ್ನ ವಿರೋಧಿಸಿ ದೇಶದಾದ್ಯಂತ ಸೋಮವಾರ ಭಾರತ್ ಬಂದ್ ಹಿನ್ನಲೆ ಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬಂದ್‌ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್ಸು ಸಂಚಾರ ಸೇರಿದಂತೆ ಆಟೋ ಕಾರು ಇನ್ನಿತರ ವಾಹನ ಸಂಚಾರ ಯಥಾಸ್ಥಿತಿಯಲ್ಲಿ ನಡೆಯುತ್ತಿದ್ದು ವ್ಯಾಪಾರ ವಹಿವಾಟು, ಉದ್ಯಮ ಎಂದಿನಂತೆ ತೆರೆದಿದ್ದು ಜನಜೀವನ ಯಥಾಸ್ಥಿತಿಯಲ್ಲಿದೆ.

ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಜೋಡುಕಟ್ಟೆಯಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದವರೆಗೆ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಿ ಐ ಟಿಯು ನಾಯಕ ಬಾಲಕೃಷ್ಣ ಶೆಟ್ಟಿ ಖಾಸಗೀಕರಣ ,ರೈತ ಮಸೂದೆ ಮೂಲಕ ಕೇಂದ್ರ,ರಾಜ್ಯ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರದ ಮೋದಿ ಸರಕಾರ ಅಂಬಾನಿ ಮತ್ತು ಅದಾನಿ ಒಡೆತನದ ಕಂಪೆನಿಗಳಿಗೆ ನೆರವು ನೀಡುವುದರ ಮೂಲಕ ದೇಶದ ಸಾಮಾನ್ಯ ಹಾಗೂ ಬಡ ರೈತರಿಗೆ ಅನ್ಯಾಯ ಮಾಡುತ್ತಿದೆ. ನಿರಂತರ ಬೆಲೆ ಏರಿಕೆ ಮಾಡಿ ಜನರ ಜೀವನ ದುಸ್ತರ ಮಾಡಿರುವ ಕೇಂದ್ರ ಸರಕಾರ ಕೂಡಲೇ ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿಯನ್ನು ಕೂಡ ಅದಾನಿ, ಅಂಬಾನಿಯವರಿಗೆ ಸರಕಾರ ಮಾರಲು ಹೊರಟಿದೆ. ದೇಶದಲ್ಲಿ ಡಿಸೇಲ್,ಪೆ ಟ್ರೋಲ್, ಗ್ಯಾಸ್ ಬೆಲೆ ವಿಪರೀತ ಹೆಚ್ಚಾಗಿದೆ. ಆದರೆ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಸರಕಾರ ಕೂಡಲೇ ರೈತರ ಮಾತನ್ನು ಒಪ್ಪಿ ಕೃಷಿ ತಿದ್ದುಪಡಿ ಕಾಯಿದೆ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿ ಹಂತದಲ್ಲಿ ಖಾಸಗಿ ಲಾಬಿಗೆ ಮಣಿಯುತ್ತಿರುವ ಬಿಜೆಪಿ ಸರಕಾರ ಉಡುಪಿಯನ್ನು ಕೂಡ ಬಿಟ್ಟಲ್ಲ. ಉಡುಪಿಯ ಶಾಸಕ ರಘುಪತಿ ಭಟ್‌ ಅವರು ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಕೂಡ ಮುಂದಿನ ದಿನಗಳಲ್ಲಿ ಇಲ್ಲಿನ ಫಲತ್ತಾದ ಭೂಮಿಯನ್ನು ಖಾಸಗಿ ಕಂಪೆನಿಗಳಿಗೆ ನೀಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ರೈತರು ಹಲವು ತಿಂಗಳಿನಿಂದ ಪ್ರತಿಭಟಿಸುತ್ತಿದ್ದರೂ ಕೇಂದ್ರ ಸರಕಾರ ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ನಮ್ಮ ಜಿಲ್ಲೆಯ ಸಂಸದೆ ಪ್ರಸ್ತುತ ಕೇಂದ್ರದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕೂಡ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಉಡುಪಿ ಶಾಸಕ ರಘುಪತಿ ಭಟ್‌ ಕೂಡ ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಕಾಂಗ್ರೆಸ್‌ ನಾಯಕರಾದ ಯತೀಶ್‌ ಕರ್ಕೇರಾ, ಡಿಯೋನ್‌ ಡಿಸೋಜ, ಹಮ್ಮದ್‌, ಶಶಿಧರ ಶೆಟ್ಟಿ ಎಲ್ಲೂರು, ದಲಿತ ಸಂಘರ್ಷ ಸಮಿತಯ ಸುಂದರ ಮಾಸ್ತರ್‌, ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷರಾದ ಇದ್ರಿಸ್ ಹೂಡೆ, ಸಾಲಿಡಾರಿಟಿಯ ಝಕ್ರಿಯಾ ನೇಜಾರ್, ಎಸ್.ಡಿ.ಪಿಐ ಜಿಲ್ಲಾಧ್ಯಕ್ಷರಾದ ನಝೀರ್ ಅಹ್ಮದ್,ಫಾ.ವಿಲಿಯಮ್ ಮಾರ್ಟಿಸ್, ವೆಲ್ಫೇರ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶಾರೂಕ್,ಎಸ್.ಐ.ಓ ಜಿಲ್ಲಾ ಕಾರ್ಯದರ್ಶಿ ಅಸ್ಜದ್ ಹೂಡೆ, ಸುಶಿಲಾ ನಾಡ, ಕವಿರಾಜ್, ಇಫ್ತಿಕಾರ್ ಉಡುಪಿ, ಅಕ್ರಮ್ ಸೈಯದ್,  ಎಸ್.ಡಿ.ಪಿಐನ ಶಾಹೀದ್ ಅಲಿ, ಹಾಗೂ ಇತರರು ಉಪಸ್ಥಿತರಿದ್ದರು.


Spread the love