ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಸಿದ್ದರಾಮಯ್ಯ ಕರೆ

Spread the love

ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಸಿದ್ದರಾಮಯ್ಯ ಕರೆ

ಮೈಸೂರು: ಭಾರತವನ್ನು ಒಗ್ಗೂಡಿಸುವಂತೆ (ಭಾರತ್ ಜೋಡೋ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಪಾದಯಾತ್ರೆ ಮೈಸೂರಿಗೆ ಬಂದ ವೇಳೆ ಹೆಚ್ಚಿನ ಜನರನ್ನು ಸೇರಿಸಿ ಯಶಸ್ವಿಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ನಗರ ಕಾಂಗ್ರೆಸ್ ಭವನದ ಆವರಣದಲ್ಲಿ ನಡೆದ ಭಾರತ್ ಜೋಡೋ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಯಾವುದೇ ಪಕ್ಷ, ನಾಯಕ ಮಾಡದ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿಲ್ಲ. ಸಾಮಾನ್ಯ ಜನರ ಪರವಾಗಿ ಈ ಪಾದಯಾತ್ರೆ. ಬಿಜೆಪಿ ಸರ್ಕಾರ ದೇಶವನ್ನು ಹಾಳು ಮಾಡುತ್ತಿದೆ. ಯುವಕರಿಗೆ ಉದ್ಯೋಗ ಇಲ್ಲ. ಕೆಲಸಕ್ಕೆ ಲಂಚ ಕೊಡಬೇಕು. ಬೆಲೆ ಏರಿಕೆ. ಸಾಮಾನ್ಯ ಜನರು ಬದುಕಲಾಗದ ಪರಿಸ್ಥಿತಿ ಎಂಬುದನ್ನು ರಾಹುಲ್ ಗಾಂಧಿ ಅರಿತಿದ್ದಾರೆ ಎಂದು ನುಡಿದರು.

ಪಾದಯಾತ್ರೆಯಿಂದ ನಮಗೆ ರಾಜಕೀಯ ಲಾಭ ಇದೆ. ಮುಂದಿನ 6 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ರಾಹುಲ್ ಗಾಂಧಿ ಮೈಸೂರು-ಚಾಮರಾಜನಗರ ಜಿಲ್ಲೆಗಳಿಗೆ ಬಂದಾಗ ಹೆಚ್ಚು ಜನರನ್ನು ಸೇರಿಸಿದರೆ ರಾಜಕೀಯ ಲಾಭ ಆಗುತ್ತದೆ. ಈ ಐತಿಹಾಸಿಕ ಪಾದಯಾತ್ರೆ ಯಶಸ್ವಿಗೊಳಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕಿಂತ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಹೇಳಿದರು.

ನರೇಂದ್ರ ಮೋದಿ 8 ವರ್ಷಗಳ ಆಡಳಿತದಲ್ಲಿ ತಳ ಸಮುದಾಯದ, ಮಧ್ಯಮ ವರ್ಗದ ಜನರು ನೆಮ್ಮದಿಯಾಗಿಲ್ಲ. ಸಮಾಜದಲ್ಲಿ ಶಾಂತಿ ಇಲ್ಲ. ಧರ್ಮ ರಾಜಕಾರಣದ ಮೂಲಕ ದೇಶ ಒಡೆಯಲಾಗುತ್ತಿದೆ. ಯಾವುದೇ ಧರ್ಮದ ಆಧಾರದಲ್ಲಿ ದೇಶ ಇಲ್ಲ. ನಾವೆಲ್ಲ ಮನುಷ್ಯರು ಮನುಷ್ಯರಾಗಿ ಬಾಳಬೇಕು ಎಂದರು.

ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ಪಡೆದ ಮತಾಂತರ ನಿಷೇಧ ಮಸೂದೆ ಸಂವಿಧಾನ ವಿರೋಧಿ. ಅರ್ಟಿಕಲ್ 25ಯಾವುದೇ ಧರ್ಮ ಪಾಲನೆ ಮಾಡುವ ಹಕ್ಕನ್ನು ಕೊಟ್ಟಿದೆ. ಅದರ ಉಲ್ಲಂಘನೆ ಮಾಡಲಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಮಾಡಿದ ಕಾನೂನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ. ಭಾರತ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ. ಇದು ನಾಚಿಕೆಗೇಡು. ಮಾನ ಮರ್ಯಾದೆ ಗೌರವ ಏನೂ ಇಲ್ಲ. ನಾಚಿಕೆಗೆಟ್ಟ ಜನ ಎಂದು ಟೀಕಿಸಿದರು.

ಭಾಷಣದ ವೇಳೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ನರೇಂದ್ರ ಮೋದಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಜನರು ಮೋದಿಯಲ್ಲ, ರಾಹುಲ್ ಗಾಂಧಿ ಎಂದು ಕೂಗಿದರು. ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಮೋದಿಯಲ್ಲ, ರಾಹುಲ್ ಗಾಂಧಿ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಜಾನ್ ರೋಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ತನ್ವೀರ್‌ಸೇಠ್, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಆರ್.ಧರ್ಮಸೇನ, ಮುಖಂಡರಾದ ರವಿಶಂಕರ್, ಚಂದ್ರಮೌಳಿ ಕೆ.ಮರೀಗೌಡ, ಎಂ.ಲಕ್ಷ್ಮಣ್, ಮಂಜುಳಾ ಮಾಸನ, ಬಿ.ಎಂ.ರಾಮು ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here