ಭಾರೀ ಮಳೆಗೆ ನಲುಗಿದ ಹುಣಸೂರು ತಾಲೂಕಿನ ಗ್ರಾಮಗಳು

Spread the love

ಭಾರೀ ಮಳೆಗೆ ನಲುಗಿದ ಹುಣಸೂರು ತಾಲೂಕಿನ ಗ್ರಾಮಗಳು

ಮೈಸೂರು: ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯಾದ್ಯಂತ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ವಾಸದ ಮನೆಗಳು ಧರೆಗುರುಳಿದರೆ ರೈತರ ಬೆಳೆ ಜಲಾವೃತಗೊಂಡು ಸಂಪೂರ್ಣ ನೆಲಕಚ್ಚಿದ್ದು, ಮುಂದೇನು ಎಂಬ ಚಿಂತೆ ಕಾಡಲಾರಂಭಿಸಿದೆ.

ಹುಣಸೂರು ತಾಲೂಕಿನ ಹುಲ್ಯಾಳು ಗ್ರಾಮದ ಕೆರೆಕೋಡಿಯ ನೀರು ತುಂಬಿ ಹರಿಯುತ್ತಿರುವುದರಿಂದ ರೈತರ ಜಮೀನಿಗೆ ತಡೆಗೋಡೆ ಇಲ್ಲದೇ ರಾಘವೇಂದ್ರ ಮತ್ತು ಮಹೇಶ್ ಎಂಬವರಿಗೆ ಸೇರಿದ ಸರ್ವೆ ನಂಬರ್ 10/5 ಮತ್ತು 10/6ರಲ್ಲಿದ್ದ ಪಂಪ್ ಸೆಟ್ ನ ಹನಿ ನೀರಾವರಿಯ ಪೈಪ್ ಗಳು ಕೊಚ್ಚಿಕೊಂಡು ಹೋಗಿವೆ, ಹಾಗೆಯೇ ಇವರು ಜಮೀನಿನಲ್ಲಿ ಬೆಳೆದಿದ್ದ ಬೀನ್ಸ್ ಟೊಮ್ಯಾಟೋ, ಮತ್ತಿತರ ಬೆಳೆಗಳು ನೀರು ಪಾಲಾಗಿವೆ. ಇನ್ನು ಹಳ್ಳ ಕೊಳ್ಳದ ತೋಟಗಳು ನೀರಿನಿಂದ ತುಂಬಿ ಹೋಗಿರುವುದರಿಂದ ತೆಂಗಿನಗಿಡ, ಅಡಿಕೆ ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು ಹೀಗೆಯೇ ಮುಂದುವರೆದರೆ ಗಿಡಗಳು ನಾಶವಾಗುವುದಂತು ಖಚಿತ. ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಕೃಷಿ ಮಾಡಲಾಗಿತ್ತು. ಆದರೆ ಮಳೆಯಿಂದ ಹಳ್ಳಕೊಳ್ಳ ದಲ್ಲಿ ನೀರು ನಿಂತ ಪರಿಣಾಮ ಭತ್ತದ ಬೆಳೆಗೆ ಹಾನಿಯಾಗಿದೆ.

ವಿಪರೀತ ಮಳೆಯಿಂದಾಗಿ ಮುಖ್ಯರಸ್ತೆಯಲ್ಲಿ ಕಿರುಸೇತುವೆ ನಿರ್ಮಾಣ ಜತೆಗೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ನೀರು ರಸ್ತೆಯ ಮೇಲ್ಭಾಗದಲ್ಲಿ ನೀರು ಹರಿದ ಪರಿಣಾ ರಸ್ತೆ ರಸ್ತೆಗಳು ಹಾಳಾಗಿವೆ. ಯಾವುದೆಲ್ಲ ಗ್ರಾಮಗಳ ರಸ್ತೆಗಳು ಹಾಳಾಗಿವೆ ಎಂಬುದನ್ನು ನೋಡಿದ್ದೇ ಆದರೆ ಮರೂರುಕಾವಲ್- ಕಟ್ಟೆಮಳಲವಾಡಿ, ಹೆಜ್ಜೋಡ್ಲು – ದೊಡ್ಡೆಕೊಪ್ಪಲು, ಕಟ್ಟೆಮಳಲವಾಡಿ –ಉಂಡವಾಡಿ, ಮರೂರು- ಕೆರೆಗಾರ ಕೊಪ್ಪಲು, ಯಮಗುಂಬ –ಹುಣಸೂರು, ಜಾಬಗೆರೆ- ಗಾವಡಗೆರೆ, ಹಿರೀಕ್ಯಾತನಹಳ್ಳಿ- ಐಚನಹಳ್ಳಿ, ಈ ಭಾಗದ ರಸ್ತೆಗಳು ದುಸ್ಥಿತಿಗೀಡಾಗಿವೆ.

ಇದೆಲ್ಲದರ ನಡುವೆ ರಾಮನಾಥಪುರ -ತೆರಕಣಾಂಬಿ ರಾಜ್ಯ ಹೆದ್ದಾರಿ – 86 ರ ಪಕ್ಕದಲ್ಲಿರುವ ಲಕ್ಷ್ಮಣತೀರ್ಥ ನದಿಯ ಅಣೆಕಟ್ಟೆಯ ಮೇಲೆ ಮೈದುಂಬಿ ಹರಿಯುತ್ತಿರುವ ದೃಶ್ಯ ರುದ್ರರಮಣೀಯವಾಗಿದ್ದು, ಇದನ್ನು ಮಾರ್ಗದಲ್ಲಿ ತೆರಳುವ ಪ್ರವಾಸಿಗರು ನಿಂತು ನೋಡುತ್ತಾ ಖುಷಿಪಡುತ್ತಿದ್ದಾರೆ.

ಇನ್ನು ಮಳೆ ಹಾನಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗಾವಡಗೆರೆಯ ನಾಡಕಚೇರಿ ಉಪತಹಸೀಲ್ದಾರ್ ವೆಂಕಟೇಶ್ ಅವರು, ಇತ್ತೀಚೆಗೆ ಸುರಿದ ಮಳೆಗೆ ಗಾವಡಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ 32 ಮನೆಗಳಿಗೆ ಹಾನಿಯಾಗಿದ್ದು ಹಾನಿಯಾದ ಸ್ಥಳಕ್ಕೆ ನಮ್ಮ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ನಂತರ ತಾಲೂಕು ಆಡಳಿತಕ್ಕೆ ವರದಿ ನೀಡಲಾಗುವುದು ಎಂದಿದ್ದಾರೆ.

ಹುಲ್ಯಾಳು ಗ್ರಾಮದ ರೈತ ಗಿರೀಶ್ ನಿಂಬಾಳ್ಕರ್ ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆ ಮಳೆ ಬಿದ್ದಾಗ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಮತ್ತೆ ಅದೇ ರೀತಿ ನಷ್ಟವಾಗಿದೆ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಾರಿ ತಿರುಗಿಯೊ ನೋಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ರೈತ ರಾಘವೇಂದ್ರ ಮಾತನಾಡಿ, ಕೆರೆ ಕೋಡಿ ಹರಿದು ರೈತರ ಜಮೀನು ಜಲಾವೃತವಾಗಿದೆ. ರೈತರ ಜಮೀನಿಗೆ ತಡೆಗೋಡೆ ಇಲ್ಲದೇ ಕೊಚ್ಚಿಕೊಂಡು ಹೋಗುತ್ತಿದೆ. ಪ್ರತಿಸಲ ಮಳೆ ಬಿದ್ದಾಗ ನಮ್ಮ ಬೆಳೆಗೆ ಹಾನಿಯಾಗುತ್ತದೆ. ಕಳೆದ ಬಾರಿ ಬೆಳೆ ನಷ್ಟವನ್ನು ಇದುವರೆಗೂ ನೀಡಿಲ್ಲ ಜೊತೆಗೆ ರೈತರು ಜಾನುವಾರುಗಳು ತೆರಳಲು ಅನುಕೂಲವಾಗುವಂತೆ ರಸ್ತೆಯನ್ನು ಸರಿಪಡಿಸಿಲ್ಲ ಎಂದು ದೂರಿದ್ದಾರೆ.


Spread the love