ಭಿಕ್ಷಾ ಪಾತ್ರೆ ಹಿಡಿದು ಪ್ರತಿಭಟಿಸಿದ ಗ್ರಾಪಂ ಸದಸ್ಯ

Spread the love

ಭಿಕ್ಷಾ ಪಾತ್ರೆ ಹಿಡಿದು ಪ್ರತಿಭಟಿಸಿದ ಗ್ರಾಪಂ ಸದಸ್ಯ

ಚಾಮರಾಜನಗರ: ಪ್ರತಿ ಕಾಮಗಾರಿಗೂ ಪಿಡಿಓ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಭಿಕ್ಷೆಪಾತ್ರೆ ಹಿಡಿದು ಕುಳಿತ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ ರೋಡ್ ಗ್ರಾಮದ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾಮಗಾರಿ ನಡೆಸಲು ಪಿಡಿಓ ಲಂಚ ಕೇಳುತ್ತಿದ್ದಾರೆ ಎಂದು ಗ್ರಾ.ಪಂ ಸದಸ್ಯ ಅರುಳಸೆಲ್ವಂ ಎಂಬುವವರು ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಬಿರುದು ಪಡೆದುಕೊಂಡಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ನಾಲ್ ರೋಡ್ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಚರಂಡಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯೆ ಯೋಜನೆ ಮಾಡದೇ ಇರುವುದರಿಂದ ವಾರ್ಡ್ನಲ್ಲಿ ಸಮಸ್ಯೆಗಳು ತಲೆದೋರಿವೆ.

ಪಿಡಿಒ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಎಲ್ಲ ಕಾಮಗಾರಿಗಳಿಗೂ ಲಂಚ ಕೇಳುತ್ತಾರೆ. ನಾವು ಎಲ್ಲಿಂದ ಹಣ ಕೊಡಲು ಸಾಧ್ಯ ಎಂದು ಅರುಳಸೆಲ್ವಂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಭಿಕ್ಷಾ ಪಾತ್ರೆ ಎಂಬ ಬಾಕ್ಸ್ ಇಟ್ಟುಕೊಂಡು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

ತನ್ನ ವಾರ್ಡ್ನಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿಸಲು ಲಂಚ ಕೊಡಬೇಕಾಗಿರುವುದರಿಂದ ಗ್ರಾಮಸ್ಥರಿಂದ ಭಿಕ್ಷೆ ಬೇಡುತ್ತಿದ್ದೇನೆ. ಭ್ರಷ್ಟಾಚಾರ ಎಂಬುದು ಸಕ್ಕರೆ ಕಾಯಿಲೆ ಇದ್ದ ಹಾಗೆ. ಅದು ನಮ್ಮನ್ನು ಮತ್ತು ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ನಮ್ಮ ದೇಶದಲ್ಲಿ ಕರ್ತವ್ಯ ಮಾಡೋದಕ್ಕೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಯುವಕರೇ – ವಯಸ್ಕರೇ ಚಿಂತಿಸಿ ಎಂಬ ಭಿತ್ತಿ ಪತ್ರ ಬರೆದುಕೊಂಡು ಗ್ರಾಮಸ್ಥರಿಂದ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಮ್ಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ 15ನೇ ಹಣಕಾಸು ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳ ತನಿಖೆ ನಡೆಯಬೇಕು. ಕುಡಿಯುವ ನೀರಿನ ಪೈಪ್ ಹಾಗೂ ವಿದ್ಯುತ್ ಬಲ್ಪ್ ಗಳು ಕಡಿಮೆ ದರದಲ್ಲಿ ಸಿಕ್ಕರೂ ಸಹ ಅಧಿಕ ಬೆಲೆ ನೀಡಿ ಲಕ್ಷಾಂತರ ಹಣ ಲಪಟಾಯಿಸಿದ್ದಾರೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತನಿಖೆ ನಡೆಸಬೇಕು ಎಂದು ಅರುಳಸೆಲ್ವಂ ಆಗ್ರಹಿಸಿದ್ದಾರೆ.


Spread the love

Leave a Reply

Please enter your comment!
Please enter your name here