ಭೀಕರ ಅಪಘಾತ: ಆಂಬುಲೆನ್ಸ್ ಮಗುಚಿ ಒಂದೇ ಕುಟುಂಬದ ನಾಲ್ವರು ಸಾವು

Spread the love

ಭೀಕರ ಅಪಘಾತ: ಆಂಬುಲೆನ್ಸ್ ಮಗುಚಿ ಒಂದೇ ಕುಟುಂಬದ ನಾಲ್ವರು ಸಾವು

 
ಕುಂದಾಪುರ: ಶರವೇಗದಲ್ಲಿ ಧಾವಿಸುತ್ತಿದ್ದ ಆಂಬುಲೆನ್ಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣ ಕೊಠಡಿಗೆ ಢಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್ ನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ಬುಧವಾರ ಸಂಜೆ ನಡೆದಿದೆ.

 

ಘಟನೆಯಲ್ಲಿ ಹೊನ್ನಾವರದ ಹಾಡಗೇರಿಯ ನಿವಾಸಿಗಳಾದ ಮಂಜುನಾಥ ಮಾದೇವ ನಾಯ್ಕ, ಲೋಕೇಶ್ ನಾಯ್ಕ್, ಜ್ಯೋತಿ ನಾಯ್ಕ, ಬಳಕೂರಿನ ಗಜಾನನ ಲಕ್ಷ್ಮಣ ನಾಯ್ಕ್, ಮೃತಪಟ್ಟ ದುರ್ದೈವಿಗಳು. ಆಂಬುಲೆನ್ಸ್ ಒಳಗಿದ್ದ ಮಂಜುನಾಥ ಗಂಭೀರ ಗಾಯಗೊಂಡಿದ್ದು, ಆಂಬುಲೆನ್ಸ್ ಚಾಲಕ ರೋಶನ್ ಸೇರಿದಂತೆ ಟೋಲ್ ಸಿಬ್ಬಂದಿ ಶಂಬಾಜಿ ಫೋರ್ಪಡೆ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಕ್ತದೊತ್ತಡ ಹೆಚ್ಚಾದ ಹಿನ್ನೆಲೆ ಗಜಾನನ ಲಕ್ಷ್ಮಣ ನಾಯ್ಕ ಅವರನ್ನು ಭಟ್ಕಳಕ್ಕೆ ಕರೆದೊಯ್ದು ಭಟ್ಕಳ ವೈದ್ಯರ ಶಿಫಾರಸ್ಸಿನಂತೆ ಉಡುಪಿಯ ಆಸ್ಪತ್ರೆಗೆ ಕುಟುಂಬಿಕರು ಆಂಬುಲೆನ್ಸ್ ಮೂಲಕ ಸಾಗಿಸುತ್ತಿದ್ದ ವೇಳೆ ಅಪಘಾತ ನಡೆದಿದೆ. ಆಂಬುಲೆನ್ಸ್ ಚಾಲಕನ ವೇಗ ಅರಿತ ಶಿರೂರು ಟೋಲ್ ಸಿಬ್ಬಂದಿ ಮಾರ್ಗ ಮಧ್ಯೆ ಮಲಗಿದ್ದ ದನವನ್ನು ಓಡಿಸಲು ಮುಂದಾಗಿದ್ದರು. ಇದೇ ವೇಳೆ ವೇಗವಾಗಿ ಸಾಗಿ ಬರುತ್ತಿದ್ದ ಆಂಬುಲೆನ್ಸ್ ಸಾಗಲು ಅನುಕೂಲವಾಗಲಿ ಎಂದು ಇನ್ನೋರ್ವ ಟೋಲ್ ಸಿಬ್ಬಂದಿ ಗೇಟ್ ಬಳಿ ಅಡ್ಡಲಾಗಿ ಇಟ್ಟ ಬ್ಯಾರಿಕೇಡ್ ಗಳನ್ನು ತೆರವು ಮಾಡಲು ತೆರಳಿದ್ದರು. ಇದೇ ವೇಳೆ ದನ ಏಕಾಏಕಿ ಮೇಲೆದ್ದ ಕಾರಣ ತಬ್ಬಿಬ್ಬಾದ ಆಂಬುಲೆನ್ಸ್ ಚಾಲಕ ಬ್ರೇಕ್ ಅದುಮಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಆಂಬುಲೆನ್ಸ್ ಟೋಲ್ ಸಂಗ್ರಹಣ ಕೊಠಡಿಗೆ ಢಿಕ್ಕಿಯಾಗಿ ಆ ಬಳಿಕ ಮಗುಚಿ ಬಿದ್ದಿದೆ. ಢಿಕ್ಕಿಯ ತೀವೃತೆಗೆ ಆಂಬುಲೆನ್ಸ್ ಹಿಂಬದಿಯ ಬಾಗಿಲು ತೆರೆದ ಪರಿಣಾಮ ಆಂಬುಲೆನ್ಸ್ ಒಳಗಿದ್ದವರೆಲ್ಲರೂ ಹೊರಗೆ ಎಸೆಯಲ್ಪಟ್ಟಿದ್ದಾರೆ.

ಅಪಘಾತದ ಭೀಕರ ದೃಶ್ಯ ಟೋಲ್ ಗೇಟ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ದುರಂತ ಸ್ಥಳದಲ್ಲಿ ಕೆಲಕಾಲ ಭಾರಿ ಜನಸ್ತೋಮ ನೆರೆದಿತ್ತು.


Spread the love