ಭೋವಿ ಸಮಾಜದವರಿಗೆ ಮಾತ್ರ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿ

Spread the love

ಭೋವಿ ಸಮಾಜದವರಿಗೆ ಮಾತ್ರ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿ

ಬೆಂಗಳೂರು: ರಾಜ್ಯದ ಕಲ್ಲು ಗಣಿಗಾರಿಕೆ ಕೇಂದ್ರಗಳನ್ನು ಬಂಡವಾಳಶಾಹಿಗಳಿಗೆ ನೀಡುವ ಮೂಲಕ, ಇದನ್ನೇ ಕುಲ ಕಸುಬಾಗಿ ಮಾಡಿಕೊಂಡಿರುವ ಭೋವಿ ಸಮಾಜದವರ ಮೇಲೆ ಆರ್ಥಿಕವಾಗಿ ಅತ್ಯಾಚಾರ ಮಾಡಲಾಗುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ಮುಖಂಡ, ವಿರಾಜಪೇಟೆಯ ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜುರವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಸವರಾಜುರವರು, “ಅನೇಕ ಶತಮಾನಗಳಿಂದಲೂ ಭೋವಿ ಸಮಾಜದವರು ಕಲ್ಲು ಗಣಿಗಾರಿಕೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಂಡವಾಳಶಾಹಿಗಳು, ಶಾಸಕರಿಗೆ, ರಾಜಕೀಯ ಬಲಾಢ್ಯರಿಗೆ ಮಾತ್ರ ಕ್ರಷರ್‌ ಯೂನಿಟ್‌ಗಳನ್ನು ನೀಡುವ ಮೂಲಕ ಭೋವಿ ಸಮಾಜದವರ ಉದ್ಯೋಗವನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯದ ಯಾವ ಶಾಸಕರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಹಿಗಳಿಗೆ ನಾಡಿನ ಸಂಪನ್ಮೂಲದ ಮೇಲೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಇರುವುದಿಲ್ಲ. ಕೇವಲ ದುಡ್ಡು ಮಾಡುವ ಉದ್ದೇಶ ಹೊಂದಿರುವ ಅವರು ರಾಜ್ಯದ ಸಂಪನ್ಮೂಲವನ್ನು ಸಾಧ್ಯವಾದಷ್ಟು ಲೂಟಿ ಮಾಡುತ್ತಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ಅಕ್ರಮವನ್ನು ಬಂಡವಾಳಶಾಹಿಗಳು ಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಕಲ್ಲು ಗಣಿಗಾರಿಕೆಯನ್ನು ಭೋವಿ ಸಮಾಜದವರಿಗೆ ಮೀಸಲಿರಿಸಲಾಗಿದೆ. ರಾಜ್ಯದಲ್ಲೂ ಗಣಿ ಮತ್ತು ಭೂವಿಜ್ಞಾನ ಕಾಯಿದೆಗೆ ತಿದ್ದುಪಡಿ ತಂದು ಭೋವಿ ಸಮಾಜದವರಿಗೆ ಮಾತ್ರ ಅನುಮತಿಯನ್ನು ನೀಡಬೇಕು. ಕ್ರಷರ್‌ ಯೂನಿಟ್‌ಗಳನ್ನು ಆರಂಭಿಸಲು ಭೋವಿ ಸಮಾಜದವರಿಗೆ ಅತ್ಯಾಧುನಿಕ ಉಪಕರಣಗಳನ್ನು ಕೊಳ್ಳಲು ಆರ್ಥಿಕ ನೆರವು ನೀಡುವ ಯೋಜನೆಯನ್ನು ಆರಂಭಿಸಬೇಕು. ಇದರಿಂದ ಅವರಿಗೆ ಉದ್ಯೋಗ ಭದ್ರತೆ ಕಲ್ಪಿಸಿದಂತೆಯೂ ಆಗುತ್ತದೆ, ಬಂಡವಾಳಶಾಹಿಗಳ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದಂತೆಯೂ ಆಗುತ್ತದೆ. ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಭೋವಿ ಸಮಾಜದ ಮೇಲೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಕಾಯಿದೆಗೆ ತಿದ್ದುಪಡಿ ತರಲಿ ಎಂದು ಬಸವರಾಜುರವರು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಎಎಪಿ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್‌ ಸದಂ, ಮುಖಂಡರಾದ ಪ್ರಕಾಶ್ ನಾಗರಾಜ್, ಉಷಾ ಮೋಹನ್, ಜ್ಯೋತಿಷ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು


Spread the love