
ಭ್ರಷ್ಟಾಚಾರದ ಕುರಿತು ದೂರುಗಳಿದ್ದಲ್ಲಿ ನೀಡಿ: ದ.ಕ.- ಉಡುಪಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಲೋಕಾಯುಕ್ತಕ್ಕೆ ನೀಡಬಹುದು ಎಂದು ಮಂಗಳೂರು – ಉಡುಪಿ ವಿಭಾಗದ ಲೋಕಾಯುಕ್ತ ನೂತನ ಎಸ್ಪಿ ಲಕ್ಷ್ಮಿ ಗಣೇಶ್ ಕೆ. ತಿಳಿಸಿದರು.
ಅವರು ದ.ಕ. ಮತ್ತು ಉಡುಪಿ ವಿಭಾಗದ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ಅವರು ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಲೋಕಾಯುಕ್ತದ ಮಂಗಳೂರು ವಿಭಾಗ ಎಂದರೆ ಮಂಗಳೂರು ಹಾಗೂ ಉಡುಪಿ ಜಿಲ್ಲೆ ಎರಡು ಕೂಡ ಜತೆಗೂಡುತ್ತದೆ. ಈಗಾಗಲೇ ಎಸಿಬಿಯಲ್ಲಿರುವ ಹಳೆಯ ಪ್ರಕರಣಗಳನ್ನು ಲೋಕಯುಕ್ತಕ್ಕೆ ವರ್ಗಾವಣೆ ಮಾಡುವ ಕಾರ್ಯ ನಡೆಯುತ್ತಿದೆ. ವರ್ಗಾವಣೆಯಾದ ಬಳಿಕ ಇರುವ ಪ್ರಕರಣಗಳ ವಿರುದ್ಧ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸರಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ಅಥವಾ ಗಳಿಕೆಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದರೆ ಅವರ ವಿರುದ್ಧ ದೂರು ಸಲ್ಲಿಸಿ ಪರಿಹಾರವನ್ನು ಸಾರ್ವಜನಿಕರು ಕಂಡುಕೊಳ್ಳಬಹುದು’ ಎಂದರು.
ರಾಜ್ಯ ಸರಕಾರ ಸೆ.9, 2022ರಿಂದ ಕರ್ನಾಟಕ ಲೋಕಾಯುಕ್ತವನ್ನು ಮತ್ತಷ್ಟು ಬಲಷ್ಠ ಮಾಡಿದ್ದು, ಪೊಲೀಸ್ ಠಾಣಾ ಅಧಿಕಾರ ಜತೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ವಿಚಾರದಲ್ಲಿ ಹೆಚ್ಚಿನ ಕೆಲಸ ಮಾಡುವ ಅಧಿಕಾರ ನೀಡಿದೆ. ಯಾರಾದರೂ ಸರಕಾರಿ ಅಧಿಕಾರಿಗಳು ಕೆಲಸ ಮಾಡಿಸಿಕೊಳ್ಳಲು ಹಣ ಕೇಳುತ್ತಿದ್ದಾರೆ ಎಂದಾದರೆ ಅದು ಪಂಚಾಯತ್‌ನಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕ ದೂರು ಕೊಟ್ಟರೆ ಅದರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಈಗಾಗಲೇ ಮಂಗಳೂರು ವಿಭಾಗದಲ್ಲಿ 2 ಡಿವೈಎಸ್ಪಿ ಹಾಗೂ 1 ಇನ್ಸ್‌ಪೆಕ್ಟರ್ ಹುದ್ದೆ ಇದ್ದರೆ 1 ಇನ್ಸ್‌ಪೆಕ್ಟರ್ ಹಾಗೂ 6 ಪಿಸಿಗಳ ಹುದ್ದೆಗಳು ಖಾಲಿ ಉಳಿದಿದೆ. ಉಡುಪಿಯಲ್ಲಿ 1 ಡಿವೈಎಸ್ಪಿ ಹಾಗೂ 1 ಇನ್ಸ್‌ಪೆಕ್ಟರ್ ಗಳಿದ್ದು ಇದರಲ್ಲಿ 1 ಇನ್ಸ್‌ಪೆಕ್ಟರ್ ಹುದ್ದೆ ಖಾಲಿಯಿದೆ. ಈ ಖಾಲಿ ಇರುವ ಹುದ್ದೆಗಳು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುತ್ತದೆ ಎಂದರು.