
ಮಂಗಳೂರಿನಲ್ಲಿ ಒಂದೇ ದಿನ ಎರಡು ಅನೈತಿಕ ಪೊಲೀಸ್ಗಿರಿ ಪ್ರಕರಣ!
ಮಂಗಳೂರು: ನಗರದಲ್ಲಿ ಎರಡು ಕಡೆ ಒಂದೇ ದಿನ ಎರಡು ಪ್ರತ್ಯೇಕ ಅನೈತಿಕ ಪೊಲೀಸ್ಗಿರಿ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.
ಡಿಸೆಂಬರ್ 10ರಂದು ಬೆಳಗ್ಗೆ ನಗರ ಸರ್ವಿಸ್ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ್ದರೆ, ಸಂಜೆಯ ವೇಳೆಗೆ ನೀರುಮಾರ್ಗ ಸಮೀಪ ಯುವಕನಿಗೆ ತಂಡವೊಂದು ಗಂಭೀರ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ನೀರುಮಾರ್ಗ ಸಮೀಪ ಪಡು ಪೋಸ್ಟ್ ಆಫೀಸ್ ಬಳಿಯ ಬಿತ್ತ್ಪಾದೆ ಎಂಬಲ್ಲಿ ಅಡ್ಯಾರ್ ಪದವಿನ ಅಬ್ದುಲ್ ರಝಾಕ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದುಷ್ಕರ್ಮಿಗಳು ಪಡು ಪರಿಸರದಲ್ಲಿ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ರಝಾಕ್ರನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ರಝಾಕ್ರ ತಲೆಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ಕೂಡಲೇ ರಝಾಕ್ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೆ ಕಾರಣ ಸ್ಪಷ್ಪಗೊಂಡಿಲ್ಲ. ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದು ನಗರದ ಸ್ಟೇಟ್ಬ್ಯಾಂಕ್ ಸಮೀಪದ ಖಾಸಗಿ ಬಸ್ ನಿಲ್ದಾಣದ ಬಳಿ ಮಂಗಳೂರಿನಿಂದ ಉಡುಪಿಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ಮೂಲದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಉಡುಪಿ ಮೂಲದವರು ಎನ್ನಲಾಗಿದೆ. ನಗರದ ವಾಮಂಜೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಇವರು ಉಡುಪಿಗೆ ತೆರಳುವ ಬಸ್ಸಿನಲ್ಲಿ ಕುಳಿತಿದ್ದರು. ಇದನ್ನು ಕಂಡ ಸಂಘ ಪರಿವಾರದ ಕಾರ್ಯಕರ್ತರು ಬಸ್ಸಿನೊಳಗೆ ನುಗ್ಗಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿಯ ಗುರುತಿನ ಚೀಟಿ ಮತ್ತು ವಿಳಾಸವನ್ನು ಕೇಳಿ ಬೆದರಿಸಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್, ಪ್ರಕರಣದ ಬಗ್ಗೆ ಮತ್ತು ವಿದ್ಯಾರ್ಥಿಗಳು ಎಲ್ಲಿಯವರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
Yeste adru e hudugiyarige bhudine baralla aste .