ಮಂಗಳೂರಿನಲ್ಲಿ ಮತ್ತೆ ರ್‍ಯಾಗಿಂಗ್‌ ಪ್ರಕರಣ – ಪೋಲಿಸರಿಂದ 9 ಮಂದಿ ಆರೋಪಿಗಳ ಬಂಧನ

Spread the love

ಮಂಗಳೂರಿನಲ್ಲಿ ಮತ್ತೆ ರ್‍ಯಾಗಿಂಗ್‌ ಪ್ರಕರಣ – ಪೋಲಿಸರಿಂದ 9 ಮಂದಿ ಆರೋಪಿಗಳ ಬಂಧನ

ಮಂಗಳೂರು: ನಗರದ ಫಳ್ನೀರ್‌ ಬಳಿ ನರ್ಸಿಂಗ್‌ ಕಾಲೇಜೊಂದರ ಕೇರಳ ಮೂಲದ ವಿದ್ಯಾರ್ಥಿಗಳನ್ನು ತಮ್ಮ ಕೊಠಡಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟು ಗಡ ಬೋಳಿಸಿ, ಹಣ ನೀಡುವಂತೆ ಪೀಡಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ ಆರೋಪದಲ್ಲಿ 9 ಮಂದಿಯನ್ನು ಪಾಂಡೇಶ್ವರ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಅಭಿ, ಅಲೆಕ್ಸ್, ನಂದು, ಶ್ರೀಕುಮಾರ್‌, ಶಿಹಾಸ್, ಪುವೀಶ್, ಗೋಪಿಕೃಷ್ಣ, ಹಸನ್, ವಿಷ್ಣು, ಜಾಸಿಲ್, ಅಲೆನ್ ಎಂದು ಗುರುತಿಸಲಾಗಿದ್ದು,  ಅವರುಗಳನ್ನು ರೈಲ್ವೆ ನಿಲ್ದಾಣ ಬಳಿಯಿಂದ ಬಂಧಿಸಲಾಗಿದೆ. ಈ ಪೈಕಿ 7 ಮಂದಿ ಗಾಂಜಾ ಸೇವನೆ ಮಾಡಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ದೃಢಪಟ್ಟಿದ್ದು, ಬಂಧಿತರಲ್ಲಿ ಓರ್ವ ಸಂತ್ರಸ್ತ ವಿದ್ಯಾರ್ಥಿಗಳ ಸೀನಿಯರ್ ಆಗಿದ್ದು, ಏಳು ಮಂದಿ ಬಲ್ಮಠದ ನರ್ಸಿಂಗ್ ಕಾಲೇಜುಗಳ ಕೇರಳ ಮೂಲದ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಕಣ್ಣೂರು ಮೂಲದವರಾಗಿದ್ದು, ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ ಅಮಲ್ ಗಿರೀಶ್ ಸ್ನೇಹಿತ ಕಾರ್ತಿಕ ವಿಜಯನ್ ಜತೆ ‘ಅತ್ತಾವರದ ಡಿ ಮಾರ್ಟ್ನಿಂದ ಫಳ್ನೀರ್‌ ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಶುಕ್ರವಾರ ರಾತ್ರಿ 7.30ರ ವೇಳೆಗೆ ಹೋಗುತ್ತಿದ್ದಾಗ ಆರೋಪಿಗಳು ಎದುರು ಸಿಕ್ಕಿದ್ದರು. ಅವರಿಗೆ ಹಾಯ್ ಎಂದು ಹೇಳಿದಾಗ ಎಲ್ಲರೂ ಕಿರುಚಾಡಿಕೊಂಡು ಬಂದು ಇಬ್ಬರನ್ನು ಅವರ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಹಾಡಿಸಿದ್ದಾರೆ. ಗಡ್ಡವನ್ನು ಬೋಳಿಸಿದ್ದಾರೆ. ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 270 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ, ಹೆಲ್ಮಟ್ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಅಮಲ್ ಗಿರೀಶ್ ಪೊಲೀಸರಿಗೆ ದೂರು ನೀಡಿದ್ದರು.

ಪಾಂಡೇಶ್ವರ ಠಾಣೆ ಇನ್‌ಸ್ಪೆಕ್ಟರ್‌ ಲೋಕೇಶ್ ಎ.ಸಿ. ಹಾಗು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಶೀತಲ್ ಅಲಗೂರ್ ಅವರು ಸಿಬ್ಬಂದಿ ಜತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


Spread the love