ಮಂಗಳೂರಿನ ಶಾಂತಾ ಕೊಲೆ ಪ್ರಕರಣದಲ್ಲಿ ಸೈನೈಡ್ ಮೋಹನ್ ಖುಲಾಸೆ| ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
ಬೆಂಗಳೂರು: ಕುಖ್ಯಾತ ಸರಣಿ ಹಂತಕ ಸೈನೆಡ್ ಮೋಹನ್ ಅಲಿಯಾಸ್ ಮೋಹನ್ ಕುಮಾರ್ನನ್ನು 2006ರಲ್ಲಿ ಕೊಲ್ಲೂರಿನಲ್ಲಿ ನಡೆದ ಶಾಂತಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಖುಲಾಸೆ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರದ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಆರೋಪಿ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿಯನ್ನು ಜೋಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ನಿಂತಿರುವ ಪ್ರಕರಣದಲ್ಲಿ ಸಂಶಯದ ಲಾಭವನ್ನು ಆರೋಪಿಗೆ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಉಲ್ಲೇಖಿಸಿ, ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ಲೋಪವಿಲ್ಲ ಎಂದು ಹೇಳಿದೆ.
ಪ್ರಾಸಿಕ್ಯೂಷನ್ ಆರೋಪದ ಪ್ರಕಾರ, ಮಂಗಳೂರಿನ ಕಂಕನಾಡಿ ಸಮೀಪದ ಶಾಂತಾ ಎಂಬ ಮಹಿಳೆಗೆ ತನ್ನನ್ನು ರಾಜೇಶ್ ಎಂಬ ನಕಲಿ ಹೆಸರಿನಲ್ಲಿ ಮೋಹನ್ ಪರಿಚಯ ಮಾಡಿಕೊಂಡಿದ್ದ. ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು 2006ರ ನ.9ರಂದು ಕೊಲ್ಲೂರಿಗೆ ಕರೆದೊಯ್ದಿದ್ದ. ಅಲ್ಲಿ ಗೆಸ್ಟ್ಹೌಸ್ನಲ್ಲಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಚಿನ್ನಾಭರಣಗಳನ್ನು ಕೊಠಡಿಯಲ್ಲಿಯೇ ಬಿಡುವಂತೆ ಹೇಳಿ ಕೊಲ್ಲೂರು ದೇವಸ್ಥಾನದ ಹಿಂಭಾಗದ ಸ್ವರ್ಣಮುಖಿ ಮಂಟಪದ ಬಳಿಗೆ ಕರೆದೊಯ್ದು, ಗರ್ಭಪಾತದ ಮಾತ್ರೆ ಎಂದು ನಂಬಿಸಿ ಸೈನೆಡ್ ನೀಡಿದ್ದ. ಆಕೆ ಮೃತಪಟ್ಟ ಬಳಿಕ ಕೊಠಡಿಗೆ ಮರಳಿ ಆಕೆಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ.
ಮಹಿಳೆಯ ಮೃತದೇಹ ದೇವಸ್ಥಾನದ ಸಮೀಪ ಪತ್ತೆಯಾಗಿತ್ತು. ಮರಣೋತ್ತರ ಪರೀೆ ನಡೆಸಿದ ವೈದ್ಯರು ಸೈನೆಡ್ ವಿಷಪ್ರಾಶನದ ಸಾಧ್ಯತೆ ಬಗ್ಗೆ ವರದಿ ನೀಡಿದ್ದರು. ಆ ನಂತರ ಶವವನ್ನು ಹೂಳಲಾಗಿತ್ತು. ಆಕೆಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು. 2009ರಲ್ಲಿ ಪ್ರತ್ಯೇಕ ಪ್ರಕರಣವೊಂದರಲ್ಲಿ ಮೋಹನ್ನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ 2006ರ ಶಾಂತಾ ಕೊಲೆ ಪ್ರಕರಣದಲ್ಲೂ ಆತನ ಪಾತ್ರವಿರುವುದು ಬೆಳಕಿಗೆ ಬಂದಿತ್ತು ಎಂದು ಪ್ರಾಸಿಕ್ಯೂಷನ್ ತಿಳಿಸಿತ್ತು.
ಇದಾದ ನಂತರ ಮರುತನಿಖೆಗಾಗಿ ಶವ ಹೊರತೆಗೆದು ಮತ್ತೆ ವಿಧಿವಿಜ್ಞಾನ ಪರೀೆಗೆ ಒಳಪಡಿಸಲಾಯಿತು. ಆದರೆ, ಮೃತದೇಹವು ಸಂಪೂರ್ಣ ಕೊಳೆತುಹೋಗಿದ್ದ ಕಾರಣ ಸೈನೆಡ್ ಸೇವನೆಯಿಂದಲೇ ಸಾವು ಸಂಭವಿಸಿದೆ ಎಂದು ಖಚಿತವಾಗಿ ಸಾಬೀತುಪಡಿಸಲು ಸಾದ್ಯವಾಗಿರಲಿಲ್ಲ. ಅಲ್ಲದೆ, ಆರೋಪಿಯು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದಕ್ಕೆ ಪ್ರಾಸಿಕ್ಯೂಷನ್ ಯಾವುದೇ ಆಧಾರ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
