
ಮಂಗಳೂರು:‘ಸಾಂಸ್ಕೃತಿಕ ರಂಗದಿಬ್ಬಣ’ಕ್ಕೆ ಚಾಲನೆ
ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಸ್ಪಂದನ ಸಂಸ್ಥೆ ಆಶ್ರಯದಲ್ಲಿ ‘ಸಾಂಸ್ಕೃತಿಕ ರಂಗದಿಬ್ಬಣ’ ಕಾರ್ಯಕ್ರಮಕ್ಕೆ ನಗರದ ಪುರಭವನದಲ್ಲಿ ಸೋಮವಾರ ಸಂಜೆ ಚಾಲನೆ ದೊರೆತಿದೆ.
ಕಾರ್ಯಕ್ರಮದ ಅಂಗವಾಗಿ ಶಿವದೂತೆ ಗುಳಿಗೆ ಪೌರಾಣಿಕ ತುಳು ನಾಟಕ ಪ್ರದರ್ಶನಗೊಂಡಿತು.
ಚಾಲನೆ ನೀಡಿದ ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಕಾಂತಾರ ಚಲನಚಿತ್ರದ ಪ್ರಭಾವದಿಂದ ಅನೇಕರಿಗೆ ಸಿನಿಮಾ ಬಗ್ಗೆ ಆಸಕ್ತಿ ಮೂಡಿದೆ. ಅದೇ ರೀತಿ ಶಿವದೂತೆ ಗುಳಿಗೆ ನಾಟಕವು ರಂಗಭೂಮಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ನಾಟಕಗಳ ಬಗ್ಗೆ ಆಸಕ್ತಿ ಮೂಲು ನೆರವಾಗಿದೆ. ಕರಾವಳಿಯ ದೈವಗಳ ಕುರಿತು ಇಂಥ ನಾಟಕಗಳು ಇನ್ನಷ್ಟು ಪ್ರದರ್ಶನಗೊಳ್ಳಲಿ ಎಂದರು.
ದೇಶದ ವಿವಿಧ ಕಡೆಗಳಲ್ಲಿ ಸಂಚಲನ ಸೃಷ್ಟಿಸಿದ ತುಳು ನಾಟಕ ಶಿವದೂತೆ ಗುಳಿಗೆ ಸದ್ಯದಲ್ಲೇ ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ನಲ್ಲಿ ಪ್ರದರ್ಶನ ಕಾಣಲಿದೆ ಎಂದು ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು.
ನಾಟಕದ ಮಲಯಾಳಂ ಆವೃತ್ತಿ ದುಬೈಯಲ್ಲಿ, ನಂತರ ಪಾಲಕ್ಕಾಡ್ನಲ್ಲಿ ಪ್ರದರ್ಶನಗೊಳ್ಳಲಿದೆ. ಇಂಗ್ಲಿಷ್ನಲ್ಲಿ ನಾಟಕ ಸಿದ್ಧಗೊಳ್ಳುತ್ತಿದ್ದು ಮರಾಠಿಗೂ ಅನುವಾದ ಆಗುತ್ತಿದೆ ಎಂದು ಅವರು ವಿವರಿಸಿದರು.
ರಂಗಕರ್ಮಿ, ಚಿತ್ರ ನಟ ಕಾಸರಗೋಡು ಚಿನ್ನಾ ಮಾತನಾಡಿ ರಂಗಸ್ಪಂದನದ ಮೂಲಕ ವಿ.ಜಿ.ಪಾಲ್ ಅವರು ತುಳು ರಂಗಭೂಮಿಗೆ ಗೌರವ ತಂದುಕೊಟ್ಟಿದ್ದಾರೆ. ಅವರು ರಂಗಭೂಮಿಯ ಆಸ್ತಿ ಎಂದು ಅಭಿಪ್ರಾಯಪಟ್ಟರು.
ಒಳ್ಳೆಯ ಕೆಲಸಗಳಿಗೆ ರಂಗಭೂಮಿಯಲ್ಲಿ ಗೌರವ ಸಿಕ್ಕಿಯೇ ಸಿಗುತ್ತದೆ. ಶಿವದೂತೆ ಗುಳಿಗೆ ನಾಟಕ ಜಗತ್ತಿನಾದ್ಯಂತ ಹೆಸರು ಗಳಿಸಿದ್ದು ಇದರ ಶ್ರೇಯ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ಸಲ್ಲಬೇಕು ಎಂದು ಅವರು ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧ್ಯಕ್ಷ ಪದ್ಮರಾಜ್ ಆರ್, ನಮ್ಮ ಟಿವಿ ಆಡಳಿತ ನಿರ್ದೇಶಕ ಡಾ. ಶಿವಚರಣ್ ಶೆಟ್ಟಿ, ಎಸಿಪಿ ಮಹೇಶ್, ಕೇರಳ ಸಮಾಜಂನ ಟಿ.ಕೆ.ರಾಜು, ನಾ. ದಾ. ಶೆಟ್ಟಿ ಮತ್ತು ರಂಗಸ್ಪಂದನದ ಸಂಚಾಲಕ ವಿ.ಜಿ.ಪಾಲ್ ಉಪಸ್ಥಿತರಿದ್ದರು. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.