ಮಂಗಳೂರು ಕಂಬಳದ ಪೂರ್ವಭಾವಿ ಸಭೆ

Spread the love

ಮಂಗಳೂರು ಕಂಬಳದ ಪೂರ್ವಭಾವಿ ಸಭೆ

ಮಂಗಳೂರು: 4ನೇ ವರ್ಷದ ಮಂಗಳೂರು ಕಂಬಳದ ಪೂರ್ವಭಾವಿ ಸಭೆಯು ಫೆಬ್ರವರಿ 06 ರಂದು ನಗರದ ಪತ್ತುಮುಡಿ ಸೌಧದಲ್ಲಿ ಕಂಬಳ ಸಮಿತಿ ಅಧ್ಯಕ್ಷರಾದ ಕ್ಯಾ.ಬೃಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಂಗಳೂರು ಕಂಬಳದ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಕಂಬಳ ಕರಾವಳಿಯ ಜನಪದ ಕ್ರೀಡೆ. ಆದರೆ, ಕಂಬಳ ಬರೀಯ ಕ್ರೀಡೆಯಾಗಿ ಉಳಿಯಬಾರದು. ಅದು ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ ಆಗಬೇಕು. ಮಂಗಳೂರಿಗೆ ಟೂರಿಸಂ ಆಕರ್ಷಿಸುವ ನೆಲೆಯಲ್ಲಿ ಕಂಬಳವನ್ನು ಉತ್ಸವದ ನೆಲೆಯಲ್ಲಿ ನಡೆಸಬೇಕು ಮಂಗಳೂರು ನಗರದಲ್ಲಿ ನಡೆಯುತ್ತಿರುವ ಏಕೈಕ ಕಂಬಳ ಇದಾಗಿದ್ದು, ನಗರ ವ್ಯಾಪ್ತಿಯ ಜನರ ಪಾಲಿಗೆ ಇದು ತುಳುವರ ಉತ್ಸವದ ರೀತಿ ನಡೆಯಬೇಕು. ಕಂಬಳದ ಜೊತೆಗೆ ತುಳುನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಪ್ರದರ್ಶನಗಳು, ಸ್ಪರ್ಧೆಗಳನ್ನು ಹಮ್ಮಿಕೊಂಡರೆ ಎಲ್ಲ ರೀತಿಯ ವಯೋಮಾನದ ಜನರು ಭಾಗವಹಿಸಲು ಪ್ರೇರಣೆ ಸಿಗುತ್ತದೆ. ಜೊತೆಗೆ, ಕಂಬಳವೂ ಆಕರ್ಷಣೆ ಪಡೆಯುತ್ತದೆ. ಟೂರಿಸಂ ಆಕರ್ಷಿಸುವ ನೆಲೆಯಲ್ಲಿ ಇಂತಹ ಉತ್ಸವಗಳು ಆಯೋಜನೆ ಆಗಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೇಲು ಮಾತನಾಡಿ, ಕಳೆದ ಬಾರಿ ಕಂಬಳಕ್ಕೆ ನಿಷೇಧದ ತೂಗುಗತ್ತಿ ಬಂದಾಗ ಜಿಲ್ಲೆಯ ರಾಜಕಾರಣಿಗಳು ಪಕ್ಷ ಭೇದ ಮರೆತು ಬೆಂಬಲ ನೀಡಿದ್ದರು. ಈ ಬಾರಿಯೂ ಕೋವಿಡ್ ಕಾರಣದಿಂದ ಕಂಬಳ ಅಸಾಧ್ಯ ಎನ್ನುವಾಗ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕಂಬಳ ನಡೆಯುವಂತಾಗಲು ಕರಾವಳಿಯ ರಾಜಕೀಯ ಮುಖಂಡರು ಸಹಕಾರ ನೀಡಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮತನಾಡಿದ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಮಂಗಳೂರು ಕಂಬಳವನ್ನು ಸಿಗ್ನೇಚರ್ ಈವೆಂಟ್ ಆಗಿ ಪರಿವರ್ತಿಸಲು ಎಲ್ಲರ ಸಹಕಾರವೂ ಬೇಕು. ಮಂಗಳೂರಿನ ಯುವಕರೇ ಸೇರಿಕೊಂಡು ನಡೆಸುತ್ತಿರುವ ಈ ಕಂಬವನ್ನು ತುಳುವರ ಉತ್ಸವ ರೀತಿಯಾಗಿ ಪರಿವರ್ತಿಸಲು ಕಂಬಳ ಅಭಿಮಾನಿಗಳ ಜೊತೆಗೆ ಸರಕಾರ, ಸಾರ್ವಜನಿಕರು, ವಿವಿಧ ಸಂಘಟನೆಗಳ ಬೆಂಬಲ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮಂಗಳೂರು ಕಂಬಳವನ್ನು ಸಾಂಸ್ಕೃತಿಕ ಉತ್ಸವದ ರೂಪದಲ್ಲಿ ನಡೆಸಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದರು. ಅಲ್ಲದೆ, ಈ ಬಾರಿ ಕಂಬಳ ನಡೆಸಲು ಅನುಮತಿ ಮಾಡಿಕೊಟ್ಟ ಜಿಲ್ಲಾಧಿಕಾರಿ, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಎಲ್ಲ ಶಾಸಕರಿಗೆ ಬೃಜೇಶ್ ಚೌಟ ಅವರು ಧನ್ಯವಾದಗಳನ್ನು ಅರ್ಪಿಸಿದರು.

ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಭಾರತ ಸರಕಾರದ ಸಾಮಾಜಿಕ ಹಕ್ಕು ಸಚಿವಾಲಯದ ಸದಸ್ಯರಾದ ಭಾಸ್ಕರದಾಸ್ ಎಕ್ಕಾರು, ಕರ್ನಾಟಕ ಕ್ರೈಸ್ತ ನಿಗಮದ ಅಧ್ಯಕ್ಷರಾದ ಜೋಯಲ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ರಾಧಾಕೃಷ್ಣ , ಕಿರಣ್ ಕುಮಾರ್ ಕೋಡಿಕಲ್, ಸಂದೀಪ್ ಗರೋಡಿ, ಭರತ್ ಕುಮಾರ್, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ನಂದನ್ ಮಲ್ಯ, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ, ಖಜಾಂಚಿ ಪ್ರೀತಮ್ ರೈ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Spread the love