ಮಂಗಳೂರು: ಕೂಡಲೇ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ತೆರವು ಮಾಡಲು ಸೂಚನೆ

Spread the love

ಮಂಗಳೂರು: ಕೂಡಲೇ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ತೆರವು ಮಾಡಲು ಸೂಚನೆ

ಮಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು ಬೆಳಿಗ್ಗೆಯಿಂದಲೇ ಮಾದರಿ ಸಂಹಿತೆ ಜಾರಿಗೊಂಡ ಕಾರಣ ಸರ್ಕಾರದ ಅನುದಾನವನ್ನು ಬಳಸಿಕೊಂಡು ಹಾಕಿರುವ ಜಾಹೀರಾತು ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‍ಗಳನ್ನು ಜಿಲ್ಲೆಯಾದ್ಯಂತ ಕೂಡಲೇ ತೆರವುಗೊಳಿಸುವಂತೆ ಜಿಲ್ಲೆಯ ಎಲ್ಲಾ ಚುನಾವಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ನಿರ್ದೇಶನ ನೀಡಿದರು.

ಅವರು ಮಾ.29ರ ಬುಧವಾರ ಈ ಕುರಿತು ಹಮ್ಮಿಕೊಂಡಿದ್ದ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ, ಕಾರಣ ಅಧಿಕೃತ ಹಾಗೂ ಅನಧಿಕೃತವಾಗಿ ಹಾಕಲಾಗಿರುವ ಎಲ್ಲಾ ರೀತಿಯ ಜಾಹೀರಾತುಗಳನ್ನು ತೆರವುಗೊಳಿಸಬೇಕು, ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು, ಯಾವುದೇ ಸರ್ಕಾರಿ ಕಚೇರಿಯಲ್ಲಿ, ಸರ್ಕಾರದ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಹಾಕಲಾಗಿರುವ ರಾಜಕೀಯ ಪಕ್ಷಗಳ ಮುಖಂಡರ ಭಾವಚಿತ್ರಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದ ಅವರು, 24, 72 ಗಂಟೆಯೊಳಗೆ ನಿರ್ವಹಿಸಬೇಕಾದ ಕರ್ತವ್ಯಗಳನ್ನು ವಿವರಿಸಿದರು.

ಒಮ್ಮೆ ತೆರವು ಮಾಡಲಾದ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಹಾಗೂ ಕಟ್‍ಔಟ್‍ಗಳನ್ನು ಪುನಃ ಅಳವಡಿಸಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಕರ್ನಾಟಕ ತೆರೆದ ಸ್ಥಳಗಳ (ವಿರೂಪಗೊಳಿಸುವಿಕೆ ತಡೆಗಟ್ಟುವ) ಕಾಯ್ದೆ-1981ರಂತೆ ಆರು ತಿಂಗಳ ಜೈಲು ಶಿಕ್ಷೆ, ಎರಡು ಸಾವಿರ ರೂ.ಗಳ ದಂಡ ವಿಧಿಸಬಹುದಾಗಿದೆ, ಅದನ್ನು ಅನುμÁ್ಠನಗೊಳಿಸುವಂತೆಯೂ ಸಲಹೆ ನೀಡಿದರು.

ಅದೇ ರೀತಿ ಸಂಬಂಧಿಸಿದ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ನಿಗದಿತ ಕಾಲಮಿತಿಯಲ್ಲಿ ವರದಿ ನೀಡಬೇಕು, ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು, ನಿರ್ಲಕ್ಷ್ಯತನಕ್ಕೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ಮಾತನಾಡಿ, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ನೀಡಬೇಕಾದ ವರದಿಗಳನ್ನು ಕೂಡಲೇ ನೀಡುವಂತೆ ತಿಳಿಸಿದರು.

ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ತಹಶೀಲ್ದಾರರು, ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪುರಸಭೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.


Spread the love