ಮಂಗಳೂರು: ತಾಂತ್ರಿಕ ಶಿಕ್ಷಣ ತಜ್ಞ ಪ್ರೊ. ರಘುನಾಥ್ ರೈ ನಿಧನ
ಮಂಗಳೂರು: ನಗರದ ಖ್ಯಾತ ಸಿವಿಲ್ ಇಂಜಿನಿಯರ್ ಮತ್ತು ತಾಂತ್ರಿಕ ಶಿಕ್ಷಣ ತಜ್ಞರಾದ ಪ್ರೊ ರಘುನಾಥ್ ರೈ (95) ಅವರು ವಯೋಸಹಜ ಕಾರಣದಿಂದ ತಮ್ಮ ಪುತ್ರ ಡಾ. ಹರಿದಾಸ್ ರೈರವರ ಪಾಂಡೇಶ್ವರ ನಿವಾಸದಲ್ಲಿ ಬುಧವಾರ ನಿಧನರಾದರು.
ತಮಿಳುನಾಡಿನ ಗಿಂಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಬಿ.ಇ ಮತ್ತು ಸ್ನಾತಕೋತ್ತರ ಪದವಿ ಪಡೆದ ಬಳಿಕ ತಮಿಳುನಾಡಿನ ಚೆನೈ ನಗರದ ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಅಲ್ಲಿಂದ ಸ್ವಯಂ ನಿವೃತ್ತಿ ಪಡೆದ ರಘುನಾಥ್ ರೈ ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಬಳಿಕ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಬಳಿಕ ಸ್ಥಾಪನಾ ಪ್ರಾಂಶುಪಾಲರಾಗಿ ಪುತ್ತೂರು ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಬಳಿಕ ನಗರದ ಹೊರವಲಯದಲ್ಲಿ ಕಾರ್ಯಚರಿಸುವ ಎಂಐಟಿಇ ಇಂಜಿನಿಯರಿಂಗ್ ಶೈಕ್ಷಣಿಕ ಸಂಸ್ಥೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ತಾಂತ್ರಿಕ ಶಿಕ್ಷಣದಿಂದ ನಿವೃತ್ತಿ ಪಡೆದ ನಂತರ ಹಲವಾರು ಸಮಾಜ ಸೇವಾ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಶೇಷವಾಗಿ ಭಾರತೀಯ ವಿದ್ಯಾಭವನ, ಮಂಗಳೂರು, ಯಕ್ಷಗಾನ ಕಲೆ, ಸಾಹಿತ್ಯ, ಲೇಖಕರಾಗಿ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ರೋಟರಿ ಸಂಸ್ಥೆ, ಮಣಿಪಾಲ, ರೋಟರಿ ಸಂಸ್ಥೆ, ನಿಟ್ಟೆಯಲ್ಲಿ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್, ಮಂಗಳೂರು ಶಾಖೆಯ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರರಾದ ಡಾ. ದೇವದಾಸ್ ರೈ, ಡಾ. ಹರಿದಾಸ್ ರೈ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.